ಟೀಂ ಇಂಡಿಯಾದ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ…

100
firstsuddi

ವಿಶ್ವಕಪ್ ಬಳಿಕವೂ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಮರು ಆಯ್ಕೆಯಾಗಿದ್ದಾರೆ.

2023ರ ವಿಶ್ವಕಪ್ ಸೋಲಿನ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಬದಲಾಗುತ್ತಾರೋ, ಇಲ್ಲವೋ ಎಂಬ ಪ್ರಶ್ನೆ ಎದ್ದಿತ್ತು. ಈಗ ಬಿಸಿಸಿಐ ದ್ರಾವಿಡ್ ಅವರ ಕೋಚ್ ಅವಧಿಯನ್ನು ವಿಸ್ತರಿಸುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿದ ಬಿಸಿಸಿಐ, ಭಾರತೀಯ ತಂಡವನ್ನು ರೂಪಿಸುವಲ್ಲಿ ದ್ರಾವಿಡ್ ಅವರ ಪ್ರಮುಖ ಪಾತ್ರವನ್ನು ಮಂಡಳಿಯು ಅಂಗೀಕರಿಸುತ್ತದೆ ಮತ್ತು ಅವರ ಅಸಾಧಾರಣ ವೃತ್ತಿಪರತೆಯನ್ನು ಶ್ಲಾಘಿಸುತ್ತದೆ. ಇದರ ಜೊತೆ ಎನ್‌ಸಿಎ ಮುಖ್ಯಸ್ಥ ಮತ್ತು ಸ್ಟ್ಯಾಂಡ್-ಇನ್ ಮುಖ್ಯ ತರಬೇತುದಾರರಾಗಿ ವಿವಿಎಸ್ ಲಕ್ಷ್ಮಣ್ ಅವರ ಪಾತ್ರಗಳಿಗಾಗಿ ಮಂಡಳಿಯು ಪ್ರಶಂಸಿಸುತ್ತದೆ ಎಂದು ತಿಳಿಸಿದೆ.

ಇನ್ನು ಮತ್ತೊಮ್ಮೆ ಈ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ರಾಹುಲ್ ದ್ರಾವಿಡ್, ‘ತನ್ನ ಮೇಲೆ ನಂಬಿಕೆ ಇಟ್ಟಿರುವ ಬಿಸಿಸಿಐಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಸಿಸಿಐ ಯಾವಾಗಲೂ ತನ್ನ ಯೋಜನೆ ಮತ್ತು ದೂರದೃಷ್ಟಿಯನ್ನು ಬೆಂಬಲಿಸುತ್ತದೆ. ತನಗಾಗಿ ಸಾಕಷ್ಟು ತ್ಯಾಗ ಮಾಡಿದ ಕುಟುಂಬಕ್ಕೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ವಿಶ್ವಕಪ್ ಬಳಿಕ ನನ್ನ ಮುಂದೆ ಹೊಸ ಸವಾಲುಗಳಿದ್ದು, ಅವುಗಳನ್ನು ಎದುರಿಸಲು ಸಿದ್ಧ’ ಎಂದು ಹೇಳಿದ್ದಾರೆ.