ಟ್ರ್ಯಾಕ್ಟರ್​ಗೆ ಆಂಬ್ಯುಲೆನ್ಸ್ ಡಿಕ್ಕಿ- ಗರ್ಭಿಣಿ ದಾರುಣ ಸಾವು…

57
firstsuddi

ವಿಜಯಪುರ: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್​ಗೆ ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಡಿಕ್ಕಿಯಾಗಿ ಗರ್ಭಿಣಿ ಹಾಗೂ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದ ದಾರುಣ ಘಟನೆ ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಾಗ್ಯಶ್ರೀ ರಾವುತಪ್ಪ ಪಾರಣ್ಣನವರ (19) ಮೃತ ಗರ್ಭಿಣಿ. ಕಳೆದ ಒಂದೂವರೆ ವರ್ಷದ ಹಿಂದೆ ತಾಳಿಕೋಟೆ ತಾಲೂಕಿನ ನಾವದಗಿ ಗ್ರಾಮದ ಭಾಗ್ಯಶ್ರೀಗೆ, ರಾವುತಪ್ಪ ಅವರ ಜೊತೆಗೆ ವಿವಾಹವಾಗಿತ್ತು. ಮೊದಲ ಹೆರಿಗೆಗಾಗಿ ತವರು ಮನೆಗೆ ತೆರಳಿದ್ದ ಭಾಗ್ಯಶ್ರೀಗೆ ಇಂದು ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ, ತವರು ಮನೆ ನಾವದಗಿಯಿಂದ ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ಕರೆತರಲಾಗಿತ್ತು.

ಸಮುದಾಯ ಆಸ್ಪತ್ರೆಗೆ ಕರೆತಂದ ವೇಳೆ ಭಾಗ್ಯಶ್ರೀ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ, ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡುವಂತೆ ತಾಳಿಕೋಟೆ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದರು. ಈ ಹಿನ್ನಲೆ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಆಗಮಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದ್ದು, ಗರ್ಭಿಣಿ ಹಾಗೂ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದೆ.

ಮೃತ ಭಾಗ್ಯಶ್ರೀ ಪೋಷಕರಿಂದ ತಾಳಿಕೋಟೆ ಸಮುದಾಯ ಆಸ್ಪತ್ರೆ ಬಳಿ ಪ್ರತಿಭಟನೆ ಮಾಡಲಾಗುತ್ತಿದೆ. ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾರೆ. ಮೊದಲ ಹೆರಿಗೆಗೆ ಬಂದ ಕೂಡಲೇ ಆಕೆಯ ಪರಿಸ್ಥಿತಿ ನೋಡಿ ಮೊದಲೇ ಹೇಳಿದ್ದರೆ ನಿಧಾನವಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತಿತ್ತು. ಆದರೆ, ಹೆರಿಗೆ ನೋವು ತೀವ್ರ ಹೆಚ್ಚಾಗಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವವರೆಗೂ ನಿರ್ಲಕ್ಷ್ಯ ತೋರಿದ್ದು, ನಂತರ ಜಿಲ್ಲಾಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ ಎಂದು ಮೃತಳ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ದುರ್ಘಟನೆ ವೇಳೆ ಆಂಬ್ಯುಲೆನ್ಸ್​ನಲ್ಲಿದ್ದ ಇಬ್ಬರು ಸ್ಟಾಪ್ ನರ್ಸ್, ಓರ್ವ ಸಹಾಯಕನಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.