ವಾಷಿಂಗ್ಟನ್ : ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಕಂಪನಿಯಲ್ಲಿ ಮಾಡಿರುವ ಹಲವಾರು ಬದಲಾವಣೆಗಳಿಂದ ಭಾರೀ ಟೀಕೆಗೆ ಒಳಗಾಗಿದ್ದಾರೆ. ಅವುಗಳಲ್ಲಿ ಕಂಪನಿಯ ಅರ್ಧಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿರುವುದು, ಬ್ಲೂಟಿಕ್‍ಗೆ ಹಣ ನಿಗದಿ ಮಾಡಿರುವುದು ಸೇರಿವೆ. ಕಂಪನಿಯ ಸಿಇಒ ಬದಲಾಗಬೇಕು ಎಂಬ ಕೂಗು ಕೇಳಿಬಂದಿತ್ತು. ಇದೀಗ ಮಸ್ಕ್ ತಾವು ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಲೋನ್ ಮಸ್ಕ್, ನನ್ನ ಜವಾಬ್ದಾರಿ ತೆಗೆದುಕೊಳ್ಳಲು ಯಾರಾದರೂ ಮೂರ್ಖ ಸಿಕ್ಕ ತಕ್ಷಣವೇ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಬಳಿಕ ಕಂಪನಿಯ ಸಾಫ್ಟ್‌ವೇರ್ ಹಾಗೂ ಸರ್ವರ್ ತಂಡಗಳನ್ನು ಮುನ್ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ಮಸ್ಕ್ ತಾವು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ? ಎಂದು ಪ್ರಶ್ನೆಯನ್ನು ಕೇಳಿ ಸಮೀಕ್ಷೆಗೆ ‘ಎಸ್’ ಹಾಗೂ ‘ನೋ’ ಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಬಳಕೆದಾರರಲ್ಲಿ ಕೇಳಿದ್ದರು. ಮಸ್ಕ್ ಕೇವಲ ಸಮೀಕ್ಷೆಯನ್ನು ನಡೆಸದೇ ಇದರ ಫಲಿತಾಂಶಕ್ಕೆ ಬದ್ಧನಾಗಿರುವುದಾಗಿ ತಿಳಿಸಿದ್ದರು. ವೋಟ್ ಮಾಡುವಾಗ ಜಾಗರೂಕರಾಗಿರಿ. ಟ್ವಿಟ್ಟರ್ ಮುಖ್ಯಸ್ಥನಾಗಿ ನಾನು ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಕೈಯಲ್ಲಿದೆ ಎಂದು ಮಸ್ಕ್ ಬಳಕೆದಾರರಿಗೆ ಎಚ್ಚರಿಕೆಯನ್ನೂ ನೀಡಿದ್ದರು.
ಭಾನುವಾರ ಮಸ್ಕ್ ಸಮೀಕ್ಷೆಯ ಗಡುವು ಮುಗಿದಿದ್ದು, 1.7 ಕೋಟಿ ಮಂದಿ ವೋಟ್ ಮಾಡಿದ್ದಾರೆ. ವೋಟ್ ಮಾಡಿದ ಶೇ.57.5 ರಷ್ಟು ಬಳಕೆದಾರರು ಸಿಇಒ ಹುದ್ದೆಯನ್ನು ತೊರೆಯುವಂತೆ ಮಸ್ಕ್ಗೆ ಸೂಚಿಸಿದ್ದರೆ, ಶೇ.42.5 ರಷ್ಟು ಬಳಕೆದಾರರು ಟ್ವಿಟ್ಟರ್ ಸಿಇಒ ಸ್ಥಾನದಲ್ಲಿಯೇ ಮುಂದುವರಿಯಲು ತಿಳಿಸಿದ್ದಾರೆ. ಹೀಗಾಗಿ ಮಸ್ಕ್ ಇದೀಗ ತಾವು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.










