ಡಿಕೆಶಿ ಕೊಳಕಿನ ಜಾಲ ಬಿಡಿಸ್ತೀನಿ : ಅಶ್ವತ್ಥ್ ನಾರಾಯಣ.

65
firstsuddi

ಬೆಂಗಳೂರು: ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನಮ್ಮ ಸಹೋದರ ಸತೀಶ್ ಅವರ ಮೇಲೆ ಆರೋಪ ಮಾಡಿದಾರಲ್ಲ, ಸಾಕ್ಷ್ಯ ಕೊಟ್ಟಿದ್ದಾರಾ?. ಈ ಆರೋಪ ಮಾಡಿರೋರು ಸ್ಪಷ್ಟತೆ ಕೊಡಲಿ. ಯಾವುದನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಇರಬಹುದು, ಮಾಡಿರಬಹುದು, ಅವರ ತಮ್ಮ ಇರಬಹುದು ಅಂತಿದ್ದಾರೆ. ಮಸಿ ಬಳಿಯಲು ಹೇಳೋದು ಬೇಡ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ.

ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ ಕೈ ನಾಯಕರು. ಸಂಪೂರ್ಣ ದುರುದ್ದೇಶದ ಹೇಳಿಕೆ ಕೊಟ್ಟಿದ್ದಾರೆ. ನಿರಾಧಾರ ಹೇಳಿಕೆ, ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಇದೊಂದು ಷಡ್ಯಂತ್ರವಾಗಿದೆ. ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಸುಳ್ಳು ಆರೋಪ ಮಾಡಲಾಗಿದೆ. ತನಿಖೆಯ ವರದಿ ಬರಲಿ, ಉಪ್ಪು ತಿಂದೋನು ನೀರು ಕುಡಿದೇ ಕುಡೀತಾನೆ. ಶಿವಕುಮಾರ್ ಬಾಯಿಯಲ್ಲಿ ಹೇಳಿಕೆ ಬರುತ್ತೆ ಅಂದ್ರೆ ಅದರಲ್ಲಿ ದುರುದ್ದೇಶ ಇದೆ ಅಂತರ್ಥ. ಅಶ್ವತ್ಥ್ ನಾರಾಯಣ ಮುಖ್ಯಮಂತ್ರಿ ಆಗಿಬಿಡ್ತಾನೆ ಅನ್ನೋ ಭಯ ಇದೆ ಡಿಕೆಶಿಗೆ. ನಮ್ಮ ನಾಯಕತ್ವ, ಗುಣದ ಭಯ ಇರಲಿ ಅವರಿಗೆ ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಕುಟುಂಬದಲ್ಲಿ ಭ್ರಷ್ಟಾಚಾರ ಪದ್ಧತಿ, ಅಧಿಕಾರ ದುರ್ಬಳಕೆ ಪದ್ಧತಿ ಇಲ್ಲ. ನಮ್ಮದು ಡಿಕೆಶಿ ಕುಟುಂಬ ಅಲ್ಲ, ಇದೆಲ್ಲ ಪದ್ಧತಿ ಇರೋದಿಕ್ಕೆ. ನಾವು ಸಹಾಯ ಮಾಡ್ತೀವಿ ಅಂತ ಒಬ್ಬೇ ಒಬ್ಬರಿಗೂ ಹೇಳಿಲ್ಲ ಪಿಎಸ್ಐ ನೇಮಕಾತಿ ವಿಚಾರದಲ್ಲಿ ಯಾವುದೇ ವ್ಯಕ್ತಿಗೂ ಶಿಫಾರಸು, ನೆರವು ಕೊಡೋ ಪ್ರಶ್ನೆ ಉದ್ಭವಿಸಲ್ಲ ಎಂದು ಡಿಕೆಶಿಗೆ  ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದರು.

ರಾಮನಗರ ಜಿಲ್ಲೆಯ ಜನ ಯಾವತ್ತೂ ಡಿಕೆಶಿನ ಸಂಪೂರ್ಣ ಒಪ್ಪಿಲ್ಲ. ಡಿಕೆಶಿ ರಾಮನಗರದಲ್ಲಿ ಸೀಮಿತ ನಾಯಕ ಅಷ್ಟೇ. ನಾನೂ ರಾಮನಗರದವನೇ, ನಮ್ಮ ಪೂರ್ವಜರೂ ಅಲ್ಲಿಯವರೇ. ಡಿಕೆಶಿ ದಿಕ್ಕು ತಪ್ಪಿಸುವ ಹೇಳಿಕೆ ಕೊಟ್ಟಿದ್ದಾರೆ. ಡಿಕೆಶಿ ಬಂಡವಾಳ ಬಿಚ್ಚಿಡ್ತೀನಿ. ಇವತ್ತಿಂದಲೇ ಬಂಡವಾಳ ಬಿಚ್ಚಿಡುತ್ತೇನೆ. ಡಿಕೆಶಿಯ ಕೊಳಕಿನ ಜಾಲ ಬಿಡಿಸ್ತೀನಿ. ನಾಚಿಕೆ ಆಗಲ್ವಾ ಉಗ್ರಪ್ಪಗೆ. ಭ್ರಷ್ಟಾಚಾರ ಮಾಡಿದ್ರೆ ಹೇಳಲಿ. ಉಗ್ರಪ್ಪ ತಮ್ಮ ರಾಜಕೀಯ ಅನುಭವದಿಂದ ಮಾತಾಡಲಿ. 80 ಲಕ್ಷ ರೂ. ಕೊಟ್ಟಿದ್ದಾರೇನ್ರಿ? ಇದು ಕಟು ಸುಳ್ಳು. ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ ಎಂದರು.