ಡಿಜಿಟಲ್ ವಿಶ್ವವಿದ್ಯಾಲಯವು ದೇಶದಲ್ಲಿ ಸೀಟುಗಳ ಕೊರತೆಯ ಸಮಸ್ಯೆಯನ್ನು ಕೊನೆಗೊಳಿಸುತ್ತದೆ : ಪ್ರಧಾನಿ.

96
firstsuddi

ನವದೆಹಲಿ : ಡಿಜಿಟಲ್ ವಿಶ್ವವಿದ್ಯಾನಿಲಯವು ದೇಶದಲ್ಲಿ ಸೀಟುಗಳ ಕೊರತೆಯ ಸಮಸ್ಯೆಯನ್ನು ಕೊನೆಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಈ ವರ್ಷದ ಕೇಂದ್ರ ಬಜೆಟ್ ಶಿಕ್ಷಣ ಕ್ಷೇತ್ರದ ಮೇಲೆ ಸಕಾರಾತ್ಮಕ ಪರಿಣಾಮ ಹೇಗೆ ಬೀರಲಿದೆ ಎಂಬುದರ ಕುರಿತು ವರ್ಚುವಲ್ ವೆಬ್‌ನಾರ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಮ್ಮ ಯುವ ಪೀಳಿಗೆಯು ದೇಶದ ಭವಿಷ್ಯದ ನಾಯಕರಾಗಿದ್ದಾರೆ. ಆದ್ದರಿಂದ ಇಂದಿನ ಯುವ ಪೀಳಿಗೆಯನ್ನು ಸಶಕ್ತಗೊಳಿಸುವುದು ಎಂದರೆ ಭಾರತದ ಭವಿಷ್ಯವನ್ನು ಸಶಕ್ತಗೊಳಿಸುವುದು ಎಂದರು.

2022ರ ಕೇಂದ್ರ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ 5 ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮೊದಲನೆಯದು ಗುಣಮಟ್ಟದ ಶಿಕ್ಷಣದ ಸಾರ್ವತ್ರೀಕರಣ, ಎರಡನೆಯದು ಕೌಶಲ್ಯ ಅಭಿವೃದ್ಧಿ, ಮೂರನೆಯದು ನಗರ ಯೋಜನೆ ಮತ್ತು ವಿನ್ಯಾಸ. ನಾಲ್ಕನೆಯದು ಅಂತರಾಷ್ಟ್ರೀಕರಣ – ಭಾರತದಲ್ಲಿ ವಿಶ್ವ ದರ್ಜೆಯ ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಐದನೆಯದು ಎವಿಜಿಸಿ – ಆನಿಮೇಷನ್ ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಕಾಮಿಕ್ ಆಗಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಈ ಬಜೆಟ್ ನೆರವಾಗಲಿದೆ. ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾನಿಲಯವು ಅಭೂತಪೂರ್ವ ಹೆಜ್ಜೆಯಾಗಿದೆ. ಸೀಟುಗಳ ಕೊರತೆಯ ಸಮಸ್ಯೆಯನ್ನು ಪರಿಹರಿಸಬಹುದು. ಅನಿಯಮಿತ ಸೀಟುಗಳಿರುತ್ತವೆ. ಡಿಜಿಟಲ್ ಯುನಿವರ್ಸಿಟಿ ಆದಷ್ಟು ಬೇಗ ಪ್ರಾರಂಭವಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ನಾನು ಎಲ್ಲಾ ಪಾಲುದಾರರನ್ನು ಒತ್ತಾಯಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.