ಡೈಮಂಡ್ ಲೀಗ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ.

105
firstsuddi

ಜ್ಯೂರಿಚ್ : ಭಾರತದ ಜಾವೆಲಿನ್ ದೊರೆ ನೀರಜ್ ಚೋಪ್ರಾ ಸ್ವಿಟ್ಜರ್ ಲ್ಯಾಂಡ್ ನ ಜ್ಯೂರಿಚ್ ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ ಭಾಗಿಯಾಗಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನೀರಜ್ ಅವರ ಮೊದಲ ಪ್ರಯತ್ನ ವಿಫಲವಾಗಿದ್ದರೆ ಎರಡನೇ ಪ್ರಯತ್ನದಲ್ಲಿ 88.4 ಮೀಟರ್ ದೂರ ಎಸೆದರು. ತಮ್ಮ ಮುಂದಿನ ನಾಲ್ಕು ಎಸೆತಗಳಲ್ಲಿ 88.00ಮೀ, 86.11ಮೀ, 87.00ಮೀ ಮತ್ತು 83.60ಮೀ ಎಸೆದು ಚಾಂಪಿಯನ್ ಆಗಿ ಹೊರ ಹೊಮ್ಮಿದರು.

ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜೆಕ್ ರಿಪಬ್ಲಿಕ್ ನ ಜೇಕಬ್ ವಡ್ಲೆಜ್ 86.94 ಮೀ ಎಸೆತದೊಂದಿಗೆ ಎರಡನೇ ಸ್ಥಾನ ಪಡೆದರು. ಜರ್ಮನಿಯ ವೆಬರ್ ಜೂಲಿಯನ್ 83.73 ಮೀಟರ್ ಎಸೆದು ಮೂರನೇ ಸ್ಥಾನವನ್ನು ಪಡೆದರು.

ಈ ಹಿಂದೆ ಲಾಸನ್ ನಲ್ಲಿ ನಡೆದ ಡೈಮಂಡ್ ಲೀಗ್ ನಲ್ಲಿ 89.08 ಮೀಟರ್ ದೂರದ ಐತಿಹಾಸಿಕ ಸಾಧನೆಗೈದು ನೀರಜ್ ಚೋಪ್ರಾ ಜ್ಯೂರಿಚ್ ಡೈಮಂಡ್ ಲೀಗ್ ಫೈನಲ್ ಗೆ ಅರ್ಹತೆ ಸಂಪಾದಿಸಿದ್ದರು. ಇದೀಗ ಫೈನಲ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.