ತಜ್ಞರ ಸಲಹೆಯಂತೆ ಸಡಿಲಿಕೆ ಬಗ್ಗೆ ಕ್ರಮ : ಸಿಎಂ ಬೊಮ್ಮಾಯಿ.

63
firstsuddi

ಬೆಂಗಳೂರು : ಶುಕ್ರವಾರ ಮತ್ತೆ ತಜ್ಞರ ಜತೆ ಸಭೆ ನಡೆಸುತ್ತೇನೆ. ವೀಕೆಂಡ್ ಕರ್ಫ್ಯೂ ವಾಪಸ್, ನಿರ್ಬಂಧಗಳ ಸಡಿಲಿಕೆ ಬಗ್ಗೆ ತಜ್ಞರ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು 11, 12 ದಿನ ಮನೇಲಿದ್ದೆ. ಕ್ವಾರಂಟೈನ್ ಸಹ ಮುಗಿದಿದೆ. ಇಂದಿನಿಂದ ಕಚೇರಿಯಲ್ಲಿ ಕೆಲಸ ಮಾಡ್ತೇನೆ. ನಿನ್ನೆ ಡಿಸಿಗಳ ಜೊತೆ ಸಭೆ ನಡೆಸಿದ್ದೇನೆ. ಹಾಲಿ ನಿರ್ಬಂಧಗಳ ಪುನರ್ ಪರಿಶೀಲನೆ ಹಾಗೂ ಲಸಿಕೆ ಬಗ್ಗೆ ವಿಶೇಷ ಗಮನ ಕೊಡಲು ಸೂಚಿಸಿದ್ದೇನೆ ಎಂದರು.

ಫೆಬ್ರವರಿಯಲ್ಲಿ ಕೋವಿಡ್ ಪ್ರಕರಣಗಳು ಅತಿ ಹೆಚ್ಚು ಸಂಖ್ಯೆಗೆ ತಲುಪುವ ವಿಚಾರ ಕುರಿತು ಮಾತನಾಡಿ, ಜನವರಿ ಅಂತ್ಯಭಾಗದಿಂದ ಫೆಬ್ರವರಿ ಮಧ್ಯಭಾಗದವರೆಗೂ ಕೋವಿಡ್ ಹೆಚ್ಚಾಗುತ್ತೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಬೇರೆ ಬೇರೆ ದೇಶಗಳ ಟ್ರೆಂಡ್ ನೋಡಿ ಅಂದಾಜು ಮಾಡಿದ್ದಾರೆ. ಎಲ್ಲರೂ ಏನ್ ಚರ್ಚೆ ಮಾಡ್ತಿದಾರೆ ಅಂದ್ರೆ, ಈಗ ಕೋವಿಡ್ ಫ್ಲೂ ಥರ ಬಂದು ಹೋಗುತ್ತೆ. ಆಸ್ಪತ್ರೆಗಳಿಗೂ ಹೆಚ್ಚು ದಾಖಲಾತಿ ಆಗ್ತಿಲ್ಲ. ಹೀಗಾಗಿ ನಾವು ದೈನಂದಿನ ಕೆಲಸಗಳನ್ನು ಮಾಡ್ಕೋಬಹುದು ಅನ್ನೋ ಭಾವನೆ ಇದೆ. ಈ ಹಿನ್ನೆಲೆ ನಿಯಮಗಳ ಸಡಿಲಿಕೆ ಬಗ್ಗೆ ತಜ್ಞರು ಪರಾಮರ್ಶೆ ಮಾಡ್ತಿದಾರೆ. ಶುಕ್ರವಾರದ ಸಭೆಯಲ್ಲಿ ತಜ್ಞರ ಜತೆ ಚರ್ಚಿಸ್ತೇನೆ. ತಜ್ಞರ ಸಲಹೆಯಂತೆ ಸಡಿಲಿಕೆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕೊರೊನಾ ವಾರಿಯರ್ಸ್ ಬಗ್ಗೆ ತೀವ್ರ ಗಮನ ಕೊಡಲು ಸೂಚನೆ ನೀಡಿದ್ದೇನೆ. ಹೋಂ ಐಸೋಲೇಷನ್ ನಲ್ಲಿ ಶೇ.94ರಷ್ಟು ಸೋಂಕಿತರು ಇದ್ದಾರೆ. ಇವರ ಮೇಲೆ ಹೆಚ್ಚಿನ ಗಮನ ಕೊಡಲು ಸೂಚಿಸಲಾಗಿದೆ. ಬೂಸ್ಟರ್ ಡೋಸ್ ಕಡೆ ಗಮನ ಕೊಡಲು ಜಿಲ್ಲಾಡಳಿತಗಳಿಗೆ ಈ ಎಲ್ಲ ಸೂಚನೆ ನೀಡಿದ್ದೇನೆ ಎಂದರು.

ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿಗರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾರೇ ರೂಲ್ಸ್ ಬ್ರೇಕ್ ಮಾಡಿದರೂ ಕ್ರಮ ಕೈಗೊಳ್ತೇವೆ. ನಮ್ಮ ಪಕ್ಷದವರು, ಬೇರೆಯವರು ಎಂದು ನೋಡದೇ ಕ್ರಮ. ಈ ಬಗ್ಗೆ ಸಿಎಸ್ ರವಿಕುಮಾರ್ಗೆ ಸೂಚನೆ ನೀಡಿದ್ದೇನೆ. ಕಾಂಗ್ರೆಸ್ನವರು ದೂರು ಕೊಡುವ ಅಗತ್ಯ ಇಲ್ಲ. ಯಾರೇ ಕೋವಿಡ್ ನಿಯಮ ಉಲ್ಲಂಘಿಸಿದರೂ ಕ್ರಮ ಖಂಡಿತ ಎಂದರು.