ನವದೆಹಲಿ: ವೈಕುಂಠ ಏಕಾದಶಿಗೂ ಮುನ್ನ ತಿರುಪತಿಯಲ್ಲಿ ಭೀಕರ ದುರಂತ ಘಟನೆ ಸಂಭವಿಸಿದೆ. ವೈಕುಂಠದ್ವಾರ ಸರ್ವದರ್ಶನದ ಟಿಕೆಟ್ ವಿತರಣಾ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಏಳು ಜನರು ಮೃತಪಟ್ಟಿದ್ದು, ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದ ಕಾಲ್ತುಳಿತದ ದುರಂತ ಘಟನೆಯಿಂದ ನನಗೆ ನೋವಾಗಿದೆ. ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಆಂಧ್ರಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ತಿಳಿಸಿದ್ದಾರೆ. ಇಂದು ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ಯೋಜಿಸಲಾಗಿದೆ. ಆದರೆ, ಟೋಕನ್‍ಗಳಿಗಾಗಿ ನಿನ್ನೆ ಸಂಜೆಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಕೆಳಗೆ ಬಿದ್ದ ನಾಲ್ವರು ಮಹಿಳೆಯರು ಕಾಲ್ತುಳಿತದಿಂದ ತೀವ್ರ ಅಸ್ವಸ್ಥಗೊಂಡಿದ್ದು, ಘಟನೆಯಲ್ಲಿ ಗಾಯಗೊಂಡ 40 ಜನರಿಗೆ ತಿರುಪತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.










