ದುಬೈನಲ್ಲಿ ಭಾರೀ ಮಳೆ: ಮಂಗಳೂರು ಸೇರಿ ವಿವಿಧೆಡೆಗಳಿಂದ ತೆರಳುವ ವಿಮಾನಗಳು ರದ್ದು…

43
firstsuddi

ಮಂಗಳೂರು: ದುಬೈ ಮತ್ತು ನೆರೆಯ ಮಧ್ಯಪ್ರಾಚ್ಯ ದೇಶಗಳಲ್ಲಿ ಭಾರೀ ಮಳೆಯ ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನಿನ್ನೆ ಮಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳಿಂದ ವಿಮಾನ ಸಂಚಾರ ರದ್ದು ಮಾಡಲಾಗಿತ್ತು. ಮಂಗಳೂರು – ದುಬೈ ಮಾರ್ಗದ ನಾಲ್ಕು ವಿಮಾನಗಳು ರದ್ದುಗೊಂಡಿದ್ದವು.

ಸಾಮಾನ್ಯವಾಗಿ ಶುಷ್ಕ ಹವಾಮಾನ ಮತ್ತು ಸುಡುಬಿಸಿಲು ಕಂಡುಬರುವ ದುಬೈನಲ್ಲಿ ಮಂಗಳವಾರ ಭಾರೀ ಮಳೆಯಾಗಿದೆ. ದುಬೈ ನಗರವು ಇತಿಹಾಸದಲ್ಲಿ ಅತ್ಯಂತ ಆರ್ದ್ರ ದಿನಕ್ಕೆ ಸಾಕ್ಷಿಯಾಗಿದ್ದು, ಮರುಭೂಮಿ ದೇಶದಲ್ಲಿ ಭೀಕರ ಪ್ರವಾಹ ಉಂಟಾಗಿದೆ. ತಿರುಚಿರಾಪಳ್ಳಿಯಿಂದ ಮಂಗಳೂರು ಮಾರ್ಗದ ಮತ್ತೊಂದು ವಿಮಾನದ ಹಾರಾಟವನ್ನೂ ಸಹ ರದ್ದುಗೊಳಿಸಲಾಗಿದೆ. ಇಲ್ಲಿಂದ ಜೆಡ್ಡಾಕ್ಕೆ ತೆರಳುವ ವಿಮಾನದ ಹಾರಾಟದಲ್ಲಿಯೂ ವಿಳಂಬವಾಗಿದೆ. ರದ್ದುಗೊಳಿಸಲಾದ ವಿಮಾನಗಳು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಂಪನಿಗೆ ಸೇರಿದ್ದಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈನಿಂದ ಮಂಗಳೂರಿಗೆ ತೆರಳಬೇಕಿದ್ದ ಫ್ಲೈಟ್ ನಂಬರ್ 814, ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಫ್ಲೈಟ್ ನಂಬರ್ 813, ದುಬೈನಿಂದ ಮಂಗಳೂರಿಗೆ ತೆರಳಬೇಕಿದ್ದ ವಿಮಾನ 384 ಮತ್ತು ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಫ್ಲೈಟ್ ನಂಬರ್ 383 ಅನ್ನು ರದ್ದುಗೊಳಿಸಲಾಗಿದೆ. ಅದೇ ರೀತಿ ಮಂಗಳೂರಿನಿಂದ ಜಿದ್ದಾಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ, ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಇಂದು ರದ್ದುಗೊಳಿಸಲಾಗಿದೆ. ಜೆಡ್ಡಾದಿಂದ ಮಂಗಳೂರಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಖ್ಯೆ 796 ಮತ್ತು ಮಂಗಳೂರಿನಿಂದ ತಿರುಚಿರಾಪಳ್ಳಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೂಡಾ ವಿಳಂಬವಾಗಲಿದೆ.

ಏಪ್ರಿಲ್ 15 ರ ಮಧ್ಯರಾತ್ರಿಯಿಂದ ದುಬೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಜಲಾವೃತವಾಗಿದ್ದು, ವಿಮಾನ ಪ್ರಯಾಣಕ್ಕೆ ಅಡ್ಡಿ ಉಂಟಾಗಿದೆ. ದುಬೈನಲ್ಲಿ ಮಂಗಳವಾರ ಕೇವಲ 12 ಗಂಟೆಗಳಲ್ಲಿ ದಾಖಲೆಯ 100 ಮಿಮೀ ಮಳೆಯಾಗಿದೆ ಎಂದು ವರದಿಗಳು ತಿಳಿಸಿವೆ.