ದೆಹಲಿ ಅಬಕಾರಿ ನೀತಿ ಹಗರಣ ; ಚಾರ್ಜ್​ಶೀಟ್ ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ…

64
firstsuddi

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಏಳು ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ ಚಾರ್ಜ್​ಶೀಟ್ ಸಲ್ಲಿಸಿದ್ದು, ಸಿಬಿಐ ಸಲ್ಲಿಸಿರುವ ಚಾರ್ಜ್​ಶೀಟ್ ನಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೆಸರು ದಾಖಲಾಗಿಲ್ಲ.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7, 7 ಎ ಮತ್ತು 8ರ ಅಡಿ ಮತ್ತು ಕ್ರಿಮಿನಲ್ ಪಿತೂರಿಗಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ ಅಡಿ 10,000 ಪುಟಗಳ ಚಾರ್ಜ್​ಶೀಟ್ ನನ್ನು ಸಿಬಿಐ ಸಲ್ಲಿಸಿದೆ. ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಧೀಶ ಎಂ.ಕೆ ನಾಗ್ಪಾಲ್ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿಂದೆ ಮನೀಶ್ ಸಿಸೋಡಿಯಾ ಹೆಸರು ಹಗರಣದಲ್ಲಿ ಕೇಳಿ ಬಂದಿತ್ತು. ಅಲ್ಲದೇ ಈ ಬಗ್ಗೆ ಸಿಬಿಐ ಸಿಸೋಡಿಯಾ ಮನೆ ಮೇಲೆ ದಾಳಿ ನಡೆಸಿತ್ತು. ವಿಚಾರಣೆಗೂ ಒಳಪಡಿಸಿತ್ತು. ಇದೀಗ ಸಿಬಿಐ ಸಲ್ಲಿಸಿರುವ ಮೊದಲ  ಚಾರ್ಜ್​ಶೀಟ್ ನಲ್ಲಿ ಎಎಪಿ ಮಾಧ್ಯಮ ಉಸ್ತುವಾರಿ ವಿಜಯ್ ನಾಯರ್, ಹೈದರಾಬಾದ್ ಮೂಲದ ಉದ್ಯಮಿ ಅಭಿಷೇಕ್ ಬೋನಪಲ್ಲಿ, ಮದ್ಯದ ವ್ಯಾಪಾರಿ ಸಮೀರ್ ಮಹೇಂದ್ರ, ಬೋನಪಲ್ಲಿಯ ಸಹಾಯಕ ಅರುಣ್ ಪಿಳ್ಳೈ, ಮುತ್ತು ಗೌತಮ್ ಮತ್ತು ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನೌಕರರ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಿದೆ.

ಇದು ಸಿಬಿಐ ಸಲ್ಲಿಸಿರುವ ಮೊದಲ ಆರೋಪ ಪಟ್ಟಿಯಾಗಿದ್ದು, ವಿಚಾರಣೆ ನಡೆಯುತ್ತಿರುವ ಕಾರಣ ಹೆಚ್ಚಿನ ವಿಚಾರಣೆ ಬಳಿಕ ಇನ್ನಷ್ಟು ಆರೋಪಿಗಳ ಪಟ್ಟಿಯನ್ನು ಸಲ್ಲಿಸುವ ಸಾಧ್ಯತೆ ಇದೆ.