ಮೂಡಿಗೆರೆ :ತಾಲೂಕಿನ ಬಾಳೂರು ಗ್ರಾಮದಲ್ಲಿ ನಿವೇಶನ ರಹಿತ ಕೂಲಿ ಕಾರ್ಮಿಕರ ಪರಿಸ್ಥಿತಿ “ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ” ಎನ್ನುವಂತಾಗಿದೆ. ಹತ್ತಾರು ವರ್ಷಗಳಿಂದ ಮನೆ ಕಟ್ಟಿಕೊಳ್ಳಲು ಸೂರು ಕೋರಿ ಅರ್ಜಿ ಸಲ್ಲಿಸುತ್ತಿದ್ದ ಬಡ ಕುಟುಂಬಗಳಿಗೆ ಕೊನೆಗೂ ಎರಡು ವರ್ಷಗಳ ಹಿಂದೆ ಕಂದಾಯ ಇಲಾಖೆ 2 ಎಕರೆ ಜಾಗ ಮಂಜೂರು ಮಾಡಿತ್ತು.
ಬಾಳೂರು ಗ್ರಾಮ ಪಂಚಾಯಿತಿಯ ಪ್ರಯತ್ನದ ಫಲವಾಗಿ ಸರ್ವೇ ನಂ. 230ರಲ್ಲಿ ಮಂಜೂರಾದ ಈ ಜಾಗದಲ್ಲಿ ಲೇಔಟ್ ಪ್ಲಾನ್ ಸಿದ್ಧಪಡಿಸಿ, 33 ಮಂದಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗಿತ್ತು. ಹೆಚ್ಚಿನ ಫಲಾನುಭವಿಗಳು ದಲಿತ ಸಮುದಾಯದ ಕೂಲಿ ಕಾರ್ಮಿಕರಾಗಿದ್ದಾರೆ.
ಆದರೆ ಇದೀಗ ಜಾಗ ಹಂಚಿಕೆ ಪ್ರಕ್ರಿಯೆಗೆ ಅಡ್ಡಿಯುಂಟಾಗಿದೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯ ಪ್ರಭಾವಿ ವ್ಯಕ್ತಿ ಲಾರೆನ್ಸ್ ಅವರ ಮಾತು ಕೇಳಿ ಮೂಡಿಗೆರೆ ಆರ್‌ಐ ಬಾಬು ಫಲಾನುಭವಿಗಳಿಗೆ ನಿವೇಶನ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಫಲಾನುಭವಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಆರೋಪಿಸಿದ್ದಾರೆ.
ಇದೇ ಆರ್‌ಐ ಬಾಬು ಈ ಹಿಂದೆ ಜಾಗ ಮಂಜೂರಾತಿಗೆ ಸಹಿ ಮಾಡಿದ್ದರೂ, ಈಗ ಗುರುತಿಸಿದ ಜಾಗ ನೀಡದೆ ಸಮೀಪದ ಇಳಿಜಾರು ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳುವಂತೆ ಮೌಖಿಕ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾವು ಬಡವರಾಗಿ ಹುಟ್ಟಿದ್ದೇ ತಪ್ಪಾ? ನಮಗೂ ಬದುಕುವ ಹಕ್ಕಿಲ್ಲವೇ?” ಎಂದು ಫಲಾನುಭವಿಗಳು ಕಣ್ಣೀರಿಡುತ್ತಿದ್ದಾರೆ.
ಇನ್ನೊಂದೆಡೆ, ಮಂಜೂರಾದ ಜಾಗದಲ್ಲೇ ಮನೆ ಹಸ್ತಾಂತರ ಮಾಡುವುದಾಗಿ ಗ್ರಾಮ ಪಂಚಾಯಿತಿ ಪಣ ತೊಟ್ಟಿದೆ. ಶಾಸಕಿ ನಯನಾ ಮೋಟಮ್ಮ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವರು ಈ ರೀತಿ ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ. ಈ ಕುರಿತು ಶಾಸಕಿ ತಕ್ಷಣ ಗಮನಹರಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದ್ದಾರೆ.
ಒಟ್ಟಾರೆ, ಪ್ರಭಾವಿಗಳು ಹಾಗೂ ಕೆಲ ಅಧಿಕಾರಿಗಳ ವರ್ತನೆಗೆ ಬಡ ಜನರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದ್ದು, ಹಲವು ವರ್ಷಗಳ ಹೋರಾಟದ ಫಲವಾಗಿ ದೊರೆತ ಜಾಗವೂ ಕೈತಪ್ಪುವ ಆತಂಕ ನಿವೇಶನ ರಹಿತ ಕುಟುಂಬಗಳಲ್ಲಿ ಮೂಡಿದೆ.










