ದೇಶದ ಎಲ್ಲಾ ಅಂಚೆ ಕಛೇರಿಗಳಿಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ : ಎನ್.ರಮೇಶ್

124
firstsuddi

ಚಿಕ್ಕಮಗಳೂರು : ದೇಶದಲ್ಲಿರುವ ಎಲ್ಲಾ 1.5 ಲಕ್ಷ ಅಂಚೆ ಕಛೇರಿಗಳೂ ಈ ವರ್ಷದ ಕೊನೆಯೊಳಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಲಿವೆ ಎಂದು ಅಂಚೆ ಅಧೀಕ್ಷಕ ಎನ್.ರಮೇಶ್ ಹೇಳಿದರು.

ನಗರದ ಬಸವನಹಳ್ಳಿ ಮುಖ್ಯ ರಸ್ತೆಯಿಂದ ವೇಣುಗೋಪಾಲಸ್ವಾಮಿ ದೇವಾಲಯದ ರಸ್ತೆಗೆ ಸ್ಥಳಾಂತರಗೊಂಡ ಪೋರ್ಟರ್ ಪೇಟೆ ಉಪ ಅಂಚೆ ಕಛೇರಿಯನ್ನು ಇಂದು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.

ದೇಶದ ಎಲ್ಲಾ ಅಂಚೆ ಕಛೇರಿಗಳಿಗೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಇಲಾಖೆ ಕಾರ್ಯೋನ್ಮುಖವಾಗಿದ್ದು, ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಹಾಗೂ ಎಸ್.ಎಂ.ಎಸ್ ಬ್ಯಾಂಕಿಂಗ್ ಮೂಲಕ ಖಾತೆಗಳ ಆನ್‍ಲೈನ್ ನಿರ್ವಹಣೆ ಮತ್ತು ಆನ್‍ಲೈನ್ ವರ್ಗಾವಣೆ ಸಾಧ್ಯವಾಗಲಿದೆ ಎಂದರು.

ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹಿರಿಯ ನಾಗರೀಕರು, ಗ್ರಾಮೀಣ ಪ್ರದೇಶದ ಜನರು, ರೈತರು ಮತ್ತು ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ನೂತನ ವ್ಯವಸ್ಥೆ ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧ್ಯವಾಗಿಸುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಳೆದ ಸಾಲಿನಲ್ಲಿ 28 ಲಕ್ಷ ಫಲಾನುಭವಿಗಳಿಗೆ ಅಂಚೆ ಇಲಾಖೆಯ ಮೂಲಕ ಸಾಮಾಜಿಕ ಭದ್ರತಾ ಪಿಂಚಣಿ ತಲುಪಿಸಲಾಗಿದೆ, ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಭಾಗ್ಯಲಕ್ಷ್ಮೀ ಯೋಜನೆಯಡಿ 1.56.056 ಸುಕನ್ಯಾ ಸಮೃದ್ದಿ ಖಾತೆ ತೆರೆಯಲಾಗಿದೆ ಎಂದು ಹೇಳಿದರು.

ಅಂಚೆ ಪಾಲಕಿ ಆರ್.ಮಂಜುಳಾ ಮಾತನಾಡಿ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿದ್ದ ಉಪ ಅಂಚೆ ಕಛೇರಿಗೆ ನೀಡುತ್ತಿದ್ದ ರೀತಿಯಲ್ಲಿಯೇ ನೂತನ ಕಛೇರಿಗೂ ಸಹಕಾರ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಅಂಚೆ ಇಲಾಖೆಯ ಮಾರುಕಟ್ಟೆ ಪ್ರತಿನಿಧಿ ಹೆಚ್.ಜೆ.ದೊಡ್ಡೇಶ್, ಅಂಚೆ ನಿರೀಕ್ಷಕ ಸಾಯೀಲ್ ಮಕೀಜಾ, ಹೇಮಂತ್ ಉಪಸ್ಥಿತರಿದ್ದರು.