ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದೂ, ಈ ನಡುವೆ ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರು ಜಾಲಿ ರೈಡ್ ಮಾಡಲು ಹೋಗಿ ಅಪಘಾತ ಮಾಡಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ ಅವರು ತಮ್ಮ ಜಾಗ್ವಾರ್ ಕಾರಿನಲ್ಲಿ ತನ್ನ ಸ್ನೇಹಿತರೊಂದಿಗೆ ರಾತ್ರಿ ಹೊತ್ತಿನಲ್ಲಿ ಜಾಲಿ ರೈಡ್ ಮಾಡಲು ತೆರಳಿದ್ದು, ಈ ವೇಳೆ ಇಂದು ಬೆಳಗ್ಗಿನ ಜಾವ 3ಗಂಟೆ ಸುಮಾರಿಗೆ ವಸಂತನಗರ ಅಂಡರ್ ಪಾಸ್ ಪಿಲ್ಲರ್‍ಗೆ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಶರ್ಮಿಳಾ ಮಾಂಡ್ರೆ ಅವರ ಮುಖ, ಕೈ-ಕಾಲಿಗೆ ಗಾಯವಾಗಿದೆ. ಹಾಗೂ ಕಾರಿನಲ್ಲಿದ್ದ ತನ್ನ ಸ್ನೇಹಿತರೊಬ್ಬರಿಗೆ ಕೈಗೆ ಗಂಭೀರ ಗಾಯವಾಗಿದ್ದು, ಸದ್ಯ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಅಂಡರ್ ಪಾಸ್ ಪಿಲ್ಲರ್‍ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ ಎಂದು ತಿಳಿದು ಬಂದಿದ್ದು, ಈ ಕುರಿತು ಹೈಗ್ರೌಂಡ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










