ನವಜೋತ್ ಸಿಂಗ್ ಸಿಧು ಪದಗ್ರಹಣ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಬಸ್ ಅಪಘಾತ – ಮೂವರ ದುರ್ಮರಣ…

81
firstsuddi

ಚಂಡೀಗಢ (ಪಂಜಾಬ್) : ನವಜೋತ್ ಸಿಂಗ್ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕಾರ ಸಮಾರಂಭಕ್ಕೆ ಪಾಲ್ಗೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಜಲಂಧರ್-ಬರ್ನಾಲಾ ರಸ್ತೆಯ ಮೊಗಾದ ಲೋಹರಾ ಚೌಕ್ ನಲ್ಲಿ ಎರಡು ಬಸ್ಸುಗಳ ನಡುವೆ ಡಿಕ್ಕಿಯಾದ ಪರಿಣಾಮ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಮೂವರು ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಮೊಗಾದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮೃತರನ್ನು ನೆನೆದು ಸಂತಾಪ ವ್ಯಕ್ತಪಡಿಸಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಮೊಗಾ ಜಿಲ್ಲೆಯಲ್ಲಿ ಬಸ್ ಅಪಘಾತದ ಬಗ್ಗೆ ತಿಳಿದು ದುಃಖವಾಯಿತು. ಇದರಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಸಂಪೂರ್ಣ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮತ್ತು ಸರ್ಕಾರಕ್ಕೆ ವರದಿ ಕಳುಹಿಸುವಂತೆ ಮೊಗಾ ಡಿಸಿಗೆ ನಿರ್ದೇಶನ ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.