ನಾಪತ್ತೆಯಾಗಿದ್ದ ಚಿಕ್ಕೋಡಿಯ ಜೈನಮುನಿ ಬರ್ಬರ ಹತ್ಯೆ- ಇಬ್ಬರ ಬಂಧನ…

79
firstsuddi

ಚಿಕ್ಕೋಡಿ (ಬೆಳಗಾವಿ): ಹೀರೆಕುಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದು, ಭಕ್ತರ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಜಿಲ್ಲೆಯ ಹೀರೆಕುಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಬರ್ಬರವಾಗಿ ಹತ್ಯೆಯಾಗಿದ್ದಾರೆ. ಕಳೆದ 15 ವರ್ಷಗಳಿಂದ ನಂದಿ ಪರ್ವತ ಆಶ್ರಮದಲ್ಲಿ ವಾಸವಿದ್ದ ಇವರು ಜುಲೈ 6ರಿಂದ ಆಶ್ರಮದಿಂದ ನಾಪತ್ತೆಯಾಗಿದ್ದರು. ಈ ಕುರಿತು ಭಕ್ತರು ಆಶ್ರಮದ ಸುತ್ತಮುತ್ತ ಶೋಧ ನಡೆಸಿದ್ದರು.

ಲ್ಲಿಯೂ ಪತ್ತೆಯಾಗದ ಹಿನ್ನೆಲೆ ನಿನ್ನೆ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿತ್ತು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ಸಂದರ್ಭ ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಜೈನಮುನಿ ಹತ್ಯೆಯ ರಹಸ್ಯ ಬಯಲಾಗಿದೆ.

ಆರೋಪಿಗಳು ಹತ್ಯೆ ಮಾಡಿರುವ ಬಗ್ಗೆ ಪೊಲೀಸರ ಬಳಿ ಬಾಯ್ಬಿಟ್ಟಿದ್ದು, ಕೊಲೆ ಮಾಡಿದ ಬಳಿಕ ಶವವನ್ನು ಎಲ್ಲಿ ಬಿಸಾಕಿದ್ದಾರೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ನೀಡದೆ ಪೊಲೀಸರನ್ನು ಸತಾಯಿಸಿದ್ದಾರೆ. ಸ್ಪಷ್ಟ ಮಾಹಿತಿ ದೊರೆಯದ ಹಿನ್ನೆಲೆ ನಂದಿ ಮಹಾರಾಜರ ಮೃತದೇಹಕ್ಕಾಗಿ ಪೊಲೀಸರು ರಾತ್ರಿಯಿಡೀ ಶೋಧ ನಡೆಸಿದ್ದಾರೆ. ಖಟಕಬಾವಿ ಗ್ರಾಮ ಸೇರಿದಂತೆ ಹಲವೆಡೆ ಶೋಧ ನಡೆಸಿದ ಪೊಲೀಸರು ಮೃತದೇಹ ಸಿಗದ ಕಾರಣ ಇಂದು ಬೆಳಗ್ಗೆ 6:30ರಿಂದ ಶೋಧ ಕಾರ್ಯ ನಡೆಸಲು ಮುಂದಾಗಿದ್ದಾರೆ.

ಹಣಕಾಸಿನ ವಿಚಾರವಾಗಿ ಕೊಲೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಇನ್ನೂ ಆಶ್ರಮದಲ್ಲಿ ನೀರವ ಮೌನ ಆವರಿಸಿದೆ.