ನಾಯಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ವೃದ್ಧನ ಮೇಲೆ ಕಲ್ಲಿನಿಂದ ಹಲ್ಲೆ…

72
firstsuddi

ಬೆಂಗಳೂರು : ನಾಯಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ 71 ವರ್ಷದ ವಯೋ ವೃದ್ಧನ ಮೇಲೆ ಕಲ್ಲಿನಿಂದ ಹಲ್ಲೆ ನಡೆದಿರುವ ಘಟನೆ ನಗರದ ಬಾಣಸವಾಡಿಯಲ್ಲಿ ನಡೆದಿದೆ.

ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಪ್ಪ ಲೇಔಟ್ ನಲ್ಲಿ ಭಾನುವಾರ ರಾತ್ರಿ 11.30 ರ ಸುಮಾರಿಗೆ ಈ ಘಟನೆ ನಡೆದಿದೆ. ಗೇರಿ ರೋಜಾರಿಯೊ ನಾಯಿಯನ್ನು ಆಚೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಎದುರು ಮನೆ ನಿವಾಸಿ ಚಾರ್ಲ್ಸ್ ಎಂಬಾತನ ಕಾರಿನ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡಿದೆ.

ನಾಯಿ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇಷ್ಟಕ್ಕೆ ರೊಚ್ಚಿಗೆದ್ದ ಕಾರು ಮಾಲೀಕ ಚಾರ್ಲ್ಸ್ ಮೊದಲನೇ ಮಹಡಿಯಿಂದ ವೃದ್ಧನ ಮೇಲೆ ಕಲ್ಲು ಬೀಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದ ಗೇರಿ ರೋಜಾರಿಯೋ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಕಲ್ಲು ಬಿದ್ದ ರಭಸಕ್ಕೆ ಗೇರಿ ರೋಜಾರಿಯ ಎರಡು ಹಲ್ಲುಗಳು ಮುರಿದಿವೆ.

ಈ ಸಂಬಂಧ ಗೇರಿ ರೋಜಾರಿಯೋ ಅವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಚಾರ್ಲ್ಸ್ ತಲೆ ಮರೆಸಿಕೊಂಡಿದ್ದು, ಸದ್ಯ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.