ನಾಳೆ ಬಂದ್‍ಗೆ ಕರೆ: ಪ್ರತಿಭಟನೆ ಮಾಡುವುದು ಅವರ ಹಕ್ಕು, ನಮ್ಮದು ತಕರಾರಿಲ್ಲ, ಆದರೆ ಕಾನೂನು ಬಾಹಿರವಾದ ಯಾವುದೇ ಚಟುವಟಿಕೆಗಳನ್ನು ಮಾಡಬಾರದು: ಜಿ ಪರಮೇಶ್ವರ್.

62
firstsuddi

ಬೆಂಗಳೂರು: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ಹೋರಾಟ ತೀವ್ರಗೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ರೈತರು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಅಲ್ಲದೇ ನಾಳೆ ಮಂಡ್ಯ ಬಂದ್‍ಗೆ ಕರೆ ನೀಡಿವೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಪ್ರತಿಭಟನೆ ಮಾಡುವುದು ಅವರ ಹಕ್ಕು, ನಮ್ಮದು ತಕರಾರಿಲ್ಲ. ಆದರೆ ಕಾನೂನು ಬಾಹಿರವಾದ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡುವುದರ ಬಗ್ಗೆ ನಮ್ಮದು ತಕರಾರು ಇಲ್ಲ. ರಾಜ್ಯದ ಹಿತಾಸಕ್ತಿ ರಕ್ಷಣೆ ಮಾಡಲು ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಬಹುದು. ಆದರೆ ಯಾವುದೇ ಹಾನಿ ಮಾಡಬಾರದು. ಆ ರೀತಿಯ ಘಟನೆಗಳು ನಡೆದರೆ ತಡೆಯಲು ಪೊಲೀಸರು ಸಿದ್ಧರಾಗಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯ ಹಲವೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳು ಮಾಡಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಅಂತಹ ಘಟನೆ ಸಂಭವಿಸಿದರೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.