ನಾವು ಅಹಂಕಾರ, ಮಮಕಾರವನ್ನು ತೊರೆದರೆ ಮಾತ್ರ ಸುಖ, ಸಂತಸ, ನೆಮ್ಮದಿಯ ಬದುಕು ನಮ್ಮದಾಗುತ್ತದೆ: ಶ್ರೀ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ.

71
firstsuddi

ಚಿಕ್ಕಮಗಳೂರು: ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಬೋಧಿಸಿರುವಂತೆ ನಾವು ಅಹಂಕಾರ ಮತ್ತು ಮಮಕಾರವನ್ನು ತೊರೆದರೆ ಮಾತ್ರ ಸುಖ, ಸಂತಸ ಮತ್ತು ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದು ಶಾರದಾ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ ಹೇಳಿದರು.

ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಭಗವದ್ಗೀತೆಯ ಜನ್ಮದಿನವಾದ ನಿನ್ನೆ ಏರ್ಪಡಿಸಿದ್ದ ಗೀತಾಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯನಿಗೆ ಅಹಂಕಾರ ಮತ್ತು ಮಮಕಾರ ದೊಡ್ಡ ಶತ್ರುಗಳು, ಅವುಗಳನ್ನು ಬೆಳೆಸಿಕೊಂಡರೆ ನಮ್ಮ ಬದುಕು ನರಕವಾಗುತ್ತದೆ ಎಂದ ಮಾತಾಜಿ, ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಬೋಧಿಸಿರುವ ಸಂದೇಶಗಳು ಸಾರ್ವಕಾಲಿಕ ಸತ್ಯಗಳು. ಅವು ಇಂದಿಗೂ ಪ್ರಸ್ತುತ, ಹಾಗಾಗಿ ಅದನ್ನು ಎಲ್ಲರೂ ದಿನನಿತ್ಯ ಶ್ರವಣ, ಪಠಣ ಮತ್ತು ಮನನ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಭಗವಂತನ ಮುಖವಾಣಿಯಾದ ಭಗವದ್ಗೀತೆಯಲ್ಲಿ ಮನುಕುಲದ ಎಲ್ಲಾ ಸಮಸ್ಯೆಗಳಿಗೂ ಎಲ್ಲಾ ರೋಗಗಳಿಗೂ ಪರಿಹಾರ ಮತ್ತು ಔಷಧವಿದೆ. ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಅರ್ಜುನನನ್ನು ನೆಪ ಮಾಡಿಕೊಂಡು ಭಗವದ್ಗೀತೆಯನ್ನು ಬೋಧಿಸಿರುವುದು ನಮಗೆ. ಆದ್ದರಿಂದ ನಾವು ಅದನ್ನು ಶ್ರದ್ದೆಯಿಂದ ಅನುಸರಿಸಬೇಕು. ಹಾಗಾದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಕೆ.ಸಿ.ಶಂಕರ್, ಭಗವದ್ಗೀತೆ ಭಗವಂತನ ಮುಖವಾಣಿಯಾಗಿದೆ. ಅದನ್ನು ಶ್ರವಣ, ಮನನ ಮತ್ತು ಪಠಣ ಮಾಡಿದರೆ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.

ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯ ಮತ್ತು ಸಂಸ್ಕಾರವನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಗೀತಾಜಯಂತಿಯಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಭಗವದ್ಗೀತೆಯ ಶ್ಲೋಕಗಳ ಪಠಣ ನಡೆಯಿತು.

ಪ್ರಾಂಶುಪಾಲ ರಾಘವೇಂದ್ರ, ಉಪ ಪ್ರಾಂಶುಪಾಲೆ ಶೆಮ್ಮಿ, ವಿದ್ಯಾರ್ಥಿಗಳಾದ ನುಡಿ, ಪ್ರಾರ್ಥನಾ, ಸಾಯಿಪ್ರೇಕ್ಷಾ ಉಪಸ್ಥಿತರಿದ್ದರು.