ಪತಿಯ ವಿರುದ್ಧ ಡೌರಿ ಕೇಸ್ ದಾಖಲಿಸಿದ ಮಹಿಳಾ ಐಪಿಎಸ್ ಅಧಿಕಾರಿ..!

160
First Suddi

ಬೆಂಗಳೂರು : ತನ್ನ ಗಂಡ ವರದಕ್ಷಿಣೆ ನೀಡಬೇಕೆಂದು ಕಿರುಕುಳ ನೀಡುತ್ತಿರುವುದಾಗಿ ಐಪಿಎಸ್ ಮಹಿಳಾ ಅಧಿಕಾರಿ ವರ್ಟಿಕಾ ಕಟಿಯಾರ್ ಅವರು ಪತಿ ನಿತಿನ್ ಸುಭಾಶ್ ಹಾಗೂ ಆತನ ಕುಟುಂಬಸ್ಥರು ಸೇರಿದಂತೆ ಏಳು ಮಂದಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
2009ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿರುವ ವರ್ತಿಕಾ ಅವರು 2011ರಲ್ಲಿ ಭಾರತೀಯ ವಿದೇಶಾಂಗ ಇಲಾಖೆಯ (ಐ ಎಫ್ ಎಸ್) ಅಧಿಕಾರಿ ನಿತಿನ್ ಸುಭಾಶ್ ಅವರೊಂದಿಗೆ ಮುದುವೆಯಾಗಿದ್ದರು. ನಿತಿನ್ ದೆಹಲಿಯಲ್ಲಿ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಪತಿ ಕುಡಿಯುವ ಮತ್ತು ಧೂಮಪಾನ ಮಾಡುವ ಚಟವನ್ನು ಬೆಳೆಸಿಕೊಂಡಿದ್ದ. ಇದನ್ನು ಬಿಡುವಂತೆ ಹಲವು ಬಾರಿ ಹೇಳಿದಾಗಲೂ ಜಗಳ ಮಾಡಿ ಹಲ್ಲೆ ಮಾಡುತ್ತಿದ್ದ. ದೀಪಾವಳಿಗೆ ಉಡುಗೊರೆ ನೀಡಲಿಲ್ಲವೆಂದು ವಿಚ್ಚೇದನ ನೀಡುವುದಾಗಿ ಬೆದರಿಕೆ ಹಾಕಿದ್ದರು. ಮದುವೆಯ ಸಂದರ್ಭದಲ್ಲಿ ಚಿನ್ನಾಭರಣವನ್ನು ತೆಗೆದುಕೊಂಡಿದ್ದಾರೆ. ಅಲ್ಲದೇ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿರುವುದಾಗಿ ಐಪಿಎಸ್ ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.
ಸಂತ್ರಸ್ಥೆ ಅಜ್ಜಿಯ ಬಳಿ ಪತಿ ಐದು ಲಕ್ಷದ ಚೆಕ್ ಪಡೆದುಕೊಂಡಿದ್ದರು. ಅಲ್ಲದೇ ಮನೆ ಮಾಡುವಾಗ 35 ಲಕ್ಷ ಹಣ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪತಿ ಹಾಗೂ ಆತನ ಕುಟುಂಬಸ್ಥರ ಮೇಲೆ ವರದಕ್ಷಿಣೆ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.