ಪತ್ನಿಯೊಂದಿಗೆ ಜೊತೆಗೂಡಿ ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಕಸ ಗುಡಿಸಿದ ಸಚಿವ ಸುರೇಶ್ ಕುಮಾರ್…

368
firstsuddi

ಬೆಂಗಳೂರು : ಸದಾ ತನ್ನ ಸರಳ ವ್ಯಕ್ತಿತ್ವದ ಮೂಲಕ ಎಲ್ಲರ ಗಮನ ಸೆಳೆಯುವ ಸಚಿವ ಸುರೇಶ್ ಕುಮಾರ್ ಅವರು ಇಂದು ತಮ್ಮ ಪತ್ನಿಯೊಂದಿಗೆ ಮನೆಯ ಮುಂದಿನ ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಗುಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಮನೆಯ ಮುಂದಿನ ಕಸ ಗುಡಿಸುವ ಪೌರ ಕಾರ್ಮಿಕ ಮಹಿಳೆಯೊಬ್ಬರು ಅನಾರೋಗ್ಯದಿಂದ ಕೆಲಸಕ್ಕೆ ಬಾರದೆ ಇದ್ದುದರಿಂದ ಸಚಿವ ಸುರೇಶ್ ಕುಮಾರ್ ಹಾಗೂ ಅವರ ಪತ್ನಿ ಕಸವನ್ನು ಗುಡಿಸಿದ್ದಾರೆ. ಈ ಕಲುರಿತು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿವರು, “ಇಂದು ಬೆಳಿಗ್ಗೆ ವಾಕಿಂಗ್ ಮಾಡಿ ನಮ್ಮ ಮನೆಯ ಮುಂದಿನ ಅರ್ಧ ರಸ್ತೆಯನ್ನು ನನ್ನ ಪತ್ನಿ ಜೊತೆಗೂಡಿ ಗುಡಿಸಿದಾಗ ವ್ಯಾಯಾಮ ಮತ್ತು ಆನಂದ ಎರಡರ ಲಾಭವೂ ಆಯಿತು. ನಮ್ಮ ರಸ್ತೆಯ ಪೌರ ಕಾರ್ಮಿಕಿ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದೆ. ಆಕೆಯ ಭಾರ ಸ್ವಲ್ಪವಾದರೂ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಕಸ ಗುಡಿಸಿದೆ. ನಾವೆಲ್ಲರೂ ಆಗಾಗ ಈ ಕೆಲಸ ಮಾಡಬಹುದಲ್ಲವೇ..? ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮವಾಗುವುದರ ಜೊತೆಗೆ ಕಾರ್ಯವೂ ಆದರೆ ಉತ್ತಮ ಎಂದು ಬರೆದುಕೊಂಡಿದ್ದಾರೆ.