ಪಿಎಫ್ಐ ನಿಷೇಧ: ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮ : ಪ್ರವೀಣ್ ಸೂದ್.

52
firstsuddi

ಬೆಂಗಳೂರು : ಪಿಎಫ್ಐ ನಿಷೇಧ ಕುರಿತು ಮಾಹಿತಿ ನೀಡಿರುವ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರು, ಎನ್ ಐಎ ಅಧಿಕಾರಿಗಳು ಸೆ.22ರಂದು ನಮ್ಮ ರಾಜ್ಯದಲ್ಲಿ ದಾಳಿ ನಡೆಸಿದ್ದರು. ಎನ್ಐಎ ಸಿಬ್ಬಂದಿ 7 ಮಂದಿಯನ್ನು ಹಾಗೂ ನಾವು 15 ಮಂದಿಯನ್ನು ಬಂಧಿಸಿದ್ದೇವೆ. ಬಂಧಿತರ ವಿಚಾರಣೆ ವೇಳೆ ಕೆಲ ವಸ್ತುಗಳು ಸಿಕ್ಕಿವೆ ಎಂದು ತಿಳಿಸಿದರು.

ಭಾರತ ಸರ್ಕಾರವು ನಿನ್ನೆ ರಾತ್ರಿ ಪಿಎಫ್ಐ ಸಂಘಟನೆಯನ್ನು ಯುಎಪಿಎ ಕಾಯ್ದೆಯ ಅನ್ವಯ ನಿಷೇಧಿಸಿದೆ. ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ನಿಷೇಧದ ಬಗ್ಗೆ ಅಧಿಕೃತ ಸೂಚನೆಗಳು ಇನ್ನೊಮ್ಮೆ ಹೊರಬೀಳುತ್ತವೆ. ನಮಗೆ ಈ ಮೊದಲು ಪಿಎಫ್ಐ ನಿಷೇಧದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಷೇಧಿತ ಸಂಘಟನೆಗಳ ಪರವಾಗಿ ಯಾರೇ ಪ್ರತಿಭಟನೆ ನಡೆಸಿದರೂ ತಪ್ಪಾಗುತ್ತದೆ. ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬಂಧಿತ ಪಿಎಫ್ಐ ಕಾರ್ಯಕರ್ತರನ್ನು ನಾವು ತಹಶೀಲ್ದಾರ್ ಎದುರು ಹಾಜರುಪಡಿಸಿದ್ದೇವೆ. ಮುಂಜಾಗ್ರತಾ ಕ್ರಮವಾಗಿ 101 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗುವುದು. ರಾಜ್ಯದಲ್ಲಿ ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಳೆದೆರಡು ದಿನಗಳಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು.

ಪಿಎಫ್ಐ ಹೆಸರಿಲ್ಲಿ ಸಭೆ ನಡೆಸಿದ್ರೆ ಬೀಳುತ್ತೆ ಕೇಸ್ : ಸಂಘಟನೆಯ ಉದ್ದೇಶವೇ ಕಾನೂನು ಬಾಹಿರ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಕೃತವಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪಿಎಫ್ಐ ಅಡಿ ಏನೇ ಕೆಲಸ ಮಾಡಿದರೂ ಕಾನೂನುಬಾಹಿರ ಚಟುವಟಿಕೆಗಳ (ನಿರ್ಬಂಧ) ಕಾಯ್ದೆ (UAPA)ಅಡಿ ಪ್ರಕರಣ ದಾಖಲಾಗುತ್ತದೆ.

ಯಾವ ಹೊಸ ಕಾರ್ಯಕರ್ತರೂ ಈ ಸಂಘಟನೆಯನ್ನು ಸೇರುವಂತಿಲ್ಲ. ಈಗಾಗಲೇ ಸಂಘಟನೆ ಸೇರಿರುವ ಉಳಿದ ಮುಖಂಡರು ಪಿಎಫ್ಐ ಹೆಸರಲ್ಲಿ ಯಾವುದೇ ಕಾರ್ಯಕ್ರಮ, ಪ್ರತಿಭಟನೆ, ಹಣ ಸಂಗ್ರಹಣೆ ಮಾಡುವಂತಿಲ್ಲ. ಪಿಎಫ್ಐ ಹೆಸರೇಳಿದರೆ ಅವರ ವಿರುದ್ಧ ಕೇಸ್ ಹಾಕಲಾಗುತ್ತದೆ. ಪಿಎಫ್ಐ ಹೆಸರಲ್ಲಿ ಮನೆಯಲ್ಲಿ ನಾಲ್ಕು ಜನ ಸಭೆ ಮಾಡಿದರೂ ಕೇಸ್ ದಾಖಲಾಗುತ್ತದೆ.