ಪೂಜಾರಿಯ ಬೆತ್ತದೇಟಿಗೆ ಮಹಿಳೆ ಸಾವು!

76
firstsuddi

ಹಾಸನ : ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಗುಣಪಡಿಸುವ ನೆಪದಲ್ಲಿ ಪೂಜೆ ವೇಳೆ ಪೂಜಾರಿ ಬೆತ್ತದ ಏಟು ನೀಡಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಪಾರ್ವತಿ (47) ಮೃತಪಟ್ಟ ಮಹಿಳೆ. ಕಳೆದ ಕೆಲ ದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ. ಹೀಗಾಗಿ ದೇವರ ಮೊರೆ ಹೋಗಿದ್ದರು. ನೀವು ಗುಣಮುಖರಾಗಲು ಪೂಜೆ ಮಾಡಿಸಬೇಕು ಎಂದು ಮಹಿಳೆಗೆ ಪೂಜಾರಿ ತಿಳಿಸಿದ್ದಾರೆ. ಪೂಜೆ ಮಾಡಿ ತಲೆನೋವು ಗುಣಪಡಿಸುವುದಾಗಿ ಹೇಳಿ ಮಹಿಳೆ ತಲೆಗೆ ಹಿರಿಯಾಪಟ್ಟಣದಮ್ಮ ದೇವರ ಪೂಜಾರಿ ಬೆತ್ತದಿಂದ ಹೊಡೆದಿದ್ದಾರೆ. ಪರಿಣಾಮ ತೀವ್ರ ಅಸ್ವಸ್ಥಗೊಂಡ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಹಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನೆ ನಂತರ ಪೂಜಾರಿ ನಾಪತ್ತೆಯಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.