ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸಬೇಕು : ಬಿ.ಎಂ.ಶರಣಬಸಪ್ಪ.

118
firstsuddi

ಚಿಕ್ಕಮಗಳೂರು : ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡ ಮರಗಳನ್ನು ನೆಟ್ಟು ಬೆಳೆಸಲು ಮುಂದಾಗಬೇಕು ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ.ಶರಣಬಸಪ್ಪ ಸಲಹೆ ನೀಡಿದರು.

ತಾಲ್ಲೂಕಿನ ಅಂಬಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಗಾಂಧಿ ಜಯಂತಿ ಪ್ರಯುಕ್ತ ಇಂದು ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಶೇ.33 ರಷ್ಟು ಅರಣ್ಯವಿರಬೇಕಿತ್ತು, ಆದರೆ ನಮ್ಮ ದುರಾಸೆ ಮತ್ತು ಸ್ವಾರ್ಥದಿಂದಾಗಿ ಇಂದು ಕೇವಲ ಶೇ.22 ರಷ್ಟು ಕಾಡು ಇದೆ. ಅದನ್ನು ಶೇ.33ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಾವಿರ ಗಿಡಗಳನ್ನು ನೆಡುತ್ತಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ವನಮಹೋತ್ಸವದಡಿ ಎರಡು ಲಕ್ಷ ಸಸಿಗಳನ್ನು ನೆಡಲಾಗಿದೆ, ಶಾಲೆ, ಕಾಲೇಜು, ಆಟದ ಮೈದಾನ, ಸ್ಮಶಾನ, ಸರ್ಕಾರಿ ಕಛೇರಿಗಳಲ್ಲಿ ವ್ಯಾಪಕವಾಗಿ ಇಲಾಖೆಯಿಂದ ಗಿಡಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.

ಅರಣ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ರೈತರಿಗೆ 20 ರೂ ಬೆಲೆ ಬಾಳುವ ಗಿಡಗಳನ್ನು ಕೇವಲ ಒಂದು ಮತ್ತು ಮೂರು ರೂಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಅರಣ್ಯ ನಾಶದಿಂದಾಗಿ ಆನೆ ಸೇರಿದಂತೆ ಕಾಡುಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ಬರುತ್ತಿವೆ ಎಂದ ಅವರು ಅರಣ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಾಲೆ ಮತ್ತು ತಮ್ಮ ಮನೆಗಳಲ್ಲಿ ಗಿಡ ನೆಡುವುದರ ಜೊತೆಗೆ ಅವುಗಳನ್ನು ನೀರೆರೆದು ಪೋಷಿಸಬೇಕು, ನಾಗರೀಕರು ಒಂದು ಗಿಡ ಕಡಿದರೆ ಅದಕ್ಕೆ ಬದಲಾಗಿ ಹತ್ತು ಗಿಡಗಳನ್ನು ನೆಡಬೇಕು ಎಂದು ಮನವಿ ಮಾಡಿದರು.

ವಲಯ ಅರಣ್ಯಾಧಿಕಾರಿ ಚರಣ್‍ಕುಮಾರ್ ಮಾತನಾಡಿ ಗಿಡ ಮರಗಳನ್ನು ನೆಟ್ಟು ಹಸಿರು ಪರಿಸರವನ್ನು ಬೆಳೆಸುವುದರಿಂದ ಆಗುವ ಲಾಭಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿವಿಲ್ ಇಂಜೀನಿಯರ್ಸ್ ಅಸೋಸಿಯೇಷನ್ನಿನ ಜಿಲ್ಲಾಧ್ಯಕ್ಷ ಸಿ.ಪಿ.ಸುರೇಶ್ ಗಿಡ ಮರಗಳನ್ನು ನೆಟ್ಟು ಹಸಿರು ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದರು.

ಶಾಲೆಯ ಆವರಣದಲ್ಲಿ ವಿವಿದ ಜಾತಿಯ ಗಿಡಗಳನ್ನು ನೆಡಲಾಯಿತು, ಪರಿಸರ ಸಂರಕ್ಷಿಸುವ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು, ಸಂಘದಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಇದೇ ವೇಳೆ ಜಿಲ್ಲಾ ಸಿವಿಲ್ ಇಂಜೀನಿಯರ್ಸ್ ಅಸೋಸಿಯೇಷನ್ ವತಿಯಿಂದ ಶಾಲೆಗೆ ಸಿ.ಸಿ.ಕ್ಯಾಮರಾವನ್ನು ಕೊಡುಗೆಯಾಗಿ ನೀಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ.ನಿಂಗರಾಜು, ಸಹಸಂಯೋಜಕ ಕೆ.ಎಸ್.ಸತೀಶ್, ಜಂಟಿ ಕಾರ್ಯದರ್ಶಿ ಭವಾನಿ ಶಂಕರ್, ಇಂಜೀನಿಯರ್ ಮೋನಿಷಾ, ಖಜಾಂಚಿ ನಾಗೇಂದ್ರ ಪ್ರಸಾದ್, ಶಿಕ್ಷಣ ಇಲಾಖೆಯ ಸಿ.ಆರ್.ಪಿ ಲೋಕೇಶ್, ಮುಖ್ಯ ಶಿಕ್ಷಕರಾದ ರುದ್ರಪ್ಪ, ಸಿ.ಎಸ್.ಸುಮಿತ್ರ ಉಪಸ್ಥಿತರಿದ್ದರು.