ಚಿಕ್ಕೋಡಿ : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಮುತಾಲಿಕ್ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಮೋದ್ ಮುತಾಲಿಕ್, ನನಗೆ ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಕೊಚ್ಚಿ ಕೊಚ್ಚಿ ತುಂಡು ಮಾಡಿ ನಾಯಿಗೆ ಬಿಸಾಕುತ್ತೇನೆ ಬೋ… ಮಗನೇ ಎಂದು ಹೀನಾಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗುತ್ತಿದೆ ಅವರು ತಿಳಿಸಿದ್ದಾರೆ.
ನನಗೆ 4-5 ಕಾಲ್ ಗಳ ಮೂಲಕ ಬೆದರಿಕೆ ಕರೆಗಳು ಬಂದಿವೆ. ಉರ್ದು ಮಿಶ್ರಿತ ಮಂಗಳೂರು ಕನ್ನಡ ಭಾಷೆಯಲ್ಲಿ ಅತ್ಯಂತ ಕೆಟ್ಟದಾಗಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ನಂಬರ್ಗಳನ್ನು ಹುಕ್ಕೇರಿ ಪೊಲೀಸ್ ಠಾಣೆಗೆ ನೀಡಿ ದೂರು ದಾಖಲಿಸಿದ್ದೇನೆ. ಸೂಕ್ತ ರೀತಿಯಲ್ಲಿ ತನಿಖೆ ಮಾಡಿ, ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇಂತಹ ಬೆದರಿಕೆ ಕರೆಗಳು ನನಗೆ ಬಂದಿರುವುದು ಮೊದಲೇನಲ್ಲ. ಈ ರೀತಿಯ ಬೆದರಿಕೆ ಕರೆಗಳಿಗೆಲ್ಲ ನಾನು ಹೆದರುವುದಿಲ್ಲ. ನನಗೆ ಬೆದರಿಕೆ ಹಾಕುವ ಬದಲು ನೀವು ನ್ಯಾಯಯುತವಾಗಿ ಜೀವನ ಸಾಗಿಸಿ ಎಂದು ಮುತಾಲಿಕ್ ಕರೆ ಮಾಡಿದವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.










