ಹುಬ್ಬಳ್ಳಿ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನೇ ಕೊಲೆಗೈದಿರುವ ಘಟನೆ ನಗರದ ಎಪಿಎಂಸಿ-ಮಾರಡಗಿ ರೋಡ್ನಲ್ಲಿ ನಡೆದಿದೆ.
ಬಂಜಾರ ಕಾಲೋನಿ ನಿವಾಸಿ ಚಂದ್ರಶೇಖರ ಲಮಾಣಿ (40) ಕೊಲೆಯಾದ ವ್ಯಕ್ತಿ. ಪತ್ನಿ ಮಂಜುಳಾ ಮತ್ತು ಪ್ರಿಯಕರ ರಿಯಾಜ್ ಅಹ್ಮದ್ ಕೊಲೆ ಮಾಡಿ ಜೈಲು ಸೇರಿದ ಪ್ರೇಮಿಗಳು.
ಘಟನೆ ಹಿನ್ನಲೆ:-
ಜನವರಿ 10 ರಂದು ಎಪಿಎಂಸಿ ಮಾರಡಗಿ ರೋಡ್ನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ನವನಗರ ಪೊಲೀಸರು ಮೃತನಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಇತ್ತ ಪತ್ನಿ ಮಂಜುಳಾ ಗಂಡನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ನವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ನವನಗರ ಪೊಲೀಸರು ಎಲ್ಲಾ ಮೂಲಗಳಿಂದ ತನಿಖೆ ನಡೆಸಿ ಸತ್ಯಾಂಶ ಹೊರ ತಂದಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಚಂದ್ರಶೇಖರ ಲಮಾಣಿ ಪತ್ನಿ ಮಂಜುಳಾ ಮೇಲೆ ಸಂಶಯ ವ್ಯಕ್ತವಾಗಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪತ್ನಿ ಮಂಜುಳಾ ಮತ್ತು ಪ್ರಿಯಕರ ರಿಯಾಜ್ ಅಹ್ಮದ್ ಕೊಲೆ ಮಾಡಿರುವ ಬಗ್ಗೆ ದೃಢಪಟ್ಟಿದೆ. ಇವರಿಬ್ಬರ ವಿವಾಹೇತರ ಸಂಬಂಧಕ್ಕೆ ಪತಿ ವಿರೋಧ ವ್ಯಕ್ತಪಡಿಸಿದ್ದ. ವಿಷಯ ಗೊತ್ತಾದ ನಂತರ ಗಂಡ ನಿತ್ಯ ಕಿರುಕುಳ ನೀಡುತ್ತಿದ್ದ. ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂದು ಪ್ರಿಯಕರನಿಗೆ ಹೇಳಿ ಕೊಲೆ ಮಾಡಿಸಿರುವುದಾಗಿ ಪೊಲೀಸರ ಎದುರು ಪತ್ನಿ ಮಂಜುಳಾ ಸತ್ಯ ಬಿಚ್ಚಿಟ್ಟಿದ್ದಾಳೆ.










