ಬಣಕಲ್ : ಹರಾಜು ಪ್ರಕ್ರಿಯೆಯಲ್ಲಿ ತಾರತಮ್ಯ: ಗ್ರಾಮಸ್ಥರ ಆರೋಪ…

254
firstsuddi

ಬಣಕಲ್ : ಬಣಕಲ್ ಗ್ರಾ.ಪಂಗೆ ಸೇರಿದ ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯೆಯನ್ನು ನಡೆಸುವಾಗ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಬಣಕಲ್ ಗ್ರಾಮಸ್ಥರು ಆರೋಪಿಸಿದ್ದಾರೆ.
ಬಣಕಲ್ ಗ್ರಾಮಸ್ಥ ಜಗದೀಶ್ ಮಾತನಾಡಿ ಬಣಕಲ್ ಪೇಟೆಯಲ್ಲಿರುವ ಅಂಗಡಿ ಮಳಿಗೆಯ ಮೇಲ್ಬಾಗದ ಮಳಿಗೆಗಳನ್ನು ಮಾತ್ರ ಹರಾಜು ಹಾಕಲಾಗುತ್ತಿದ್ದು ಕೆಳಗಡೆ ಇರುವ ಮಳಿಗೆಗಳನ್ನು ಹಲವಾರು ವರ್ಷದಿಂದ ಹರಾಜು ಮಾಡಲಾಗಿಲ್ಲ. ಗ್ರಾ.ಪಂಯಿಂದ ಮಳಿಗೆಗಳನ್ನು ಹರಾಜು ಹಾಕುವಾಗ ಎಲ್ಲಾ ಮಳಿಗೆಗಳನ್ನು ಹರಾಜು ಹಾಕಬೇಕು. ಗ್ರಾ.ಪಂ ತಾರತಮ್ಮ ನೀತಿ ಅನುಸರಿಸದೇ ನಿಯಮದಂತೆ ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಬಣಕಲ್ ಗ್ರಾಮಸ್ಥ ವಿನಯ್ ಶೆಟ್ಟಿ ಮಾತನಾಡಿ ಪ್ರತಿವರ್ಷ ಹರಾಜು ಮಾಡಬೇಕು ಎಂಬ ನಿಯಮವಿದ್ದರೂ ನಿಯಮವನ್ನು ಗಾಳಿಗೆ ತೂರಲಾಗಿದೆ. ಇದರಿಂದ ಸರ್ಕಾರಕ್ಕೆ ಬರಬಹುದಾದ ಆದಾಯ ಕಡಿಮೆ ಆಗುತ್ತಿದೆ. ಗ್ರಾ.ಪಂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ವಾರದಲ್ಲಿ 3 ರಿಂದ 4 ದಿನ ರಜೆ ಹಾಕುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಗ್ರಾಮದ ಅಭಿವೃದ್ದಿಯೂ ಆಗುತ್ತಿಲ್ಲ. ಪಂಚಾಯತಿಗೆ ಯಾವುದೇ ಯೋಜನೆಗಳು ಬಂದರೂ ಸರಿಯಾದ ಪಲಾನುಭವಿಗಳಿಗೆ ಸಿಗದಂತಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಬಣಕಲ್ ಗ್ರಾ.ಪಂಗೆ ಬೇರೆ ಪಂಚಾಯತಿ ಅಭಿವೃದ್ದಿ ಅಧಿಕಾರಿಯನ್ನು ನೇಮಿಸಬೇಕು. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಸರಿಯಾಗಿ ಸ್ಪಂದಿಸದೇ ಇದ್ದರೇ ಜುಲೈ 1 ರಂದು ಬಣಕಲ್ ಗ್ರಾ.ಪಂ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬಣಕಲ್ ಪಿಡಿಓ ಚಂದ್ರಾವತಿ, ಬಣಕಲ್ ಪೇಟೆಯಲ್ಲಿರುವ ಕೆಳಭಾಗದ ಮಳಿಗೆಗಳ ಬಾಡಿಗೆಯನ್ನು ಕಳೆದ ಬಾರಿ ಹೆಚ್ಚು ಮಾಡಿದ್ದು ಈ ಬಾರಿ ಬಾಡಿಗೆದಾರರಿಗೆ ನೋಟೀಸ್ ಜಾರಿ ಮಾಡಿ ನಂತರ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.