ಬಿಎಂಟಿಸಿ ಬಸ್ ಡಿಕ್ಕಿಯಾಗಿ ಗೃಹಿಣಿ ಸಾವು…

62
firstsuddi

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಸಿಲ್ಕ್‌ಬೋರ್ಡ್‌ ಸಮೀಪದ ಮಡಿವಾಳ ಫ್ಲೈಓವರ್ ಮೇಲೆ ನಡೆದಿದೆ.

ಸೀಮಾ ಬಿಎಂಟಿಸಿಗೆ ಬಲಿಯಾದ ಗೃಹಿಣಿ. ನಿನ್ನೆ ಸಂಜೆ 6:30ರ ವೇಳೆಗೆ ಘಟನೆ ನಡೆದಿದ್ದು, ಗೃಹಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಅಪಘಾತದ ಬಳಿಕ ಬಸ್ ಬಿಟ್ಟು ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದಾರೆ.

ನಿನ್ನೆ ಸಂಜೆ ಪ್ರೋ ಕಬಡಿ ಪಂದ್ಯ ವೀಕ್ಷಿಸಲು ತಮ್ಮ ಪುಟ್ಟ ಮಗುವಿನ ಜೊತೆ ಬೈಕ್​ನಲ್ಲಿ ಹೋಗುವಾಗ ಬಸ್​ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ಸವಾರರು ಆಯತಪ್ಪಿ ಬಿದ್ದಿದ್ದಾರೆ. ಬಿಎಂಟಿಸಿ ಬಸ್​ನ ಚಕ್ರದಡಿ ಸಿಲುಕಿದ ಸೀಮಾ(21) ಹೆಲ್ಮೆಟ್ ಧರಿಸಿದ್ದರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಒಂದೂವರೆ ವರ್ಷದ ಮಗು ಗಾನವಿ, ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.

ಪತಿ ಗುರುಮೂರ್ತಿ ಸಿಂಗಸಂದ್ರ ಬೆಸ್ಕಾಂ ಉದ್ಯೋಗಿಯಾಗಿದ್ದು, ಕಳೆದ 8 ವರ್ಷದಿಂದ ಬೆಸ್ಕಾಂನಲ್ಲಿ ಲೈನ್‌ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ವಿಜಯನಗರ ಜಿಲ್ಲೆ, ಗುಡೇಕೋಟೆ ಕೂಡ್ಲಿಗಿಯ ಶ್ರೀಕಂಠಪುರ ತಾಂಡದ ನಿವಾಸಿಗಳಾದ ದಂಪತಿ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತ ಗೃಹಿಣಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.