ಬಿಪಿಎಲ್ ಪಡಿತರದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್ – 5 ಕೆಜಿ ಜೊತೆ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ…

47
firstsuddi

ಬೆಂಗಳೂರು : ಬಿಪಿಎಲ್ ಪಡಿತರದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಅನ್ನಭಾಗ್ಯ ಯೋಜನೆಯಡಿ ಆದ್ಯತಾ ಕುಟುಂಬಗಳಿಗೆ(ಬಿಪಿಎಲ್ ಪಡಿತರದಾರರಿಗೆ) 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆಗೆ ಆದೇಶ ಹೊರಡಿಸಿದೆ.

ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್) ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತಿತ್ತು. ಇದೀಗ ರಾಜ್ಯದಲ್ಲಿರುವ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುತ್ತಿರುವ 5 ಕೆಜಿ ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು 1 ಕೆಜಿ ಅಕ್ಕಿಯನ್ನು ವಿತರಿಸಲು ಸರ್ಕಾರ ಆದೇಶಿಸಿದೆ. ಜನವರಿ 1ರಿಂದಲೇ ಈ ಆದೇಶ ಜಾರಿಗೊಳ್ಳಲಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಮಾವೇಶವೊಂದರಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಡಿತರದಾರರಿಗೆ 10 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ 5 ಕೆಜಿ ಪಡಿತರ ಜೊತೆಗೆ 1 ಕೆಜಿ ಹೆಚ್ಚುವರಿ ಅಕ್ಕಿ ನೀಡುವುದಾಗಿ ತಿಳಿಸಿದೆ.