ಬಿಮ್ಸ್ ಆಸ್ಪತ್ರೆಗೆ ವಿಜಯೇಂದ್ರ ಭೇಟಿ ಬಾಣಂತಿಯರು, ಶಿಶುಗಳ ಸಾವಿಗೆ ಸರ್ಕಾರದ ಬೇಜವಾಬ್ದಾರಿಯೇ ಕಾರಣವೆಂದು ಕಿಡಿ.

35

ಬೆಳಗಾವಿ: ಬಳ್ಳಾರಿಯಲ್ಲಿ ಬಾಣಂತಿಯರು ಸಾವು ಪ್ರಕರಣ ಬೆನ್ನಲ್ಲೇ ಬೆಳಗಾವಿಯಲ್ಲೂ ಬಾಣಂತಿಯರು, ಶಿಶುಗಳ ಮರಣ ಪ್ರಕರಣ ಕಳೆದ ಆರು ತಿಂಗಳಲ್ಲಿ ಏರಿಕೆಯಾದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಲ್ಲಿನ ಬಿಮ್ಸ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್‍ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದರು. ಈ ವೇಳೆ ವಿಜಯೇಂದ್ರ ಅವರಿಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ, ಶಾಸಕಿ ಶಶಿಕಲಾ ಜೊಲ್ಲೆ ಸೇರಿ ಜಿಲ್ಲೆಯ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದರು. ಬಾಣಂತಿಯರ ಆರೋಗ್ಯವನ್ನು ವಿಚಾರಿಸಿ, ವೈದ್ಯರಿಂದ ಮಾಹಿತಿಯನ್ನು ಪಡೆದರು. ರಾಜಕಾರಣ ಮಾಡುವ ಪ್ರಶ್ನೆ ಇಲ್ಲ: ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಜಯೇಂದ್ರ ವಿಪಕ್ಷ ನಾಯಕರು ಈಗಾಗಲೇ ಈ ಬಗ್ಗೆ ಮಾತನಾಡಿದ್ದಾರೆ. ಬಳ್ಳಾರಿಯಲ್ಲಿ 6 ಜನ ಬಾಣಂತಿಯರು, ಹಸುಗೂಸುಗಳು ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲೊ ಒಂದು ಕಡೆ ಇದರಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿ ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಾಗಿ, ಇದರ ಬಗ್ಗೆ ಸಮಗ್ರವಾಗಿ ಸತ್ಯಾಂಶ ತಿಳಿದುಕೊಳ್ಳಬೇಕೆಂದು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇವೆ. ಇದರಲ್ಲಿ ರಾಜಕಾರಣ ಮಾಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇಂದು ಬಡವರಿಗೆ ಅನ್ಯಾಯ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಗೆ ಹೋಗುವ ಬಾಣಂತಿಯರಿಗೆ ತೊಂದರೆ ಆಗುತ್ತಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸತ್ಯಾಂಶ ಅರ್ಥ ಮಾಡಿಕೊಳ್ಳಬೇಕೆಂದು ಇಲ್ಲಿಗೆ ಬಂದಿದ್ದೇವೆ. ಈ ಬಗ್ಗೆ ಸದನದಲ್ಲಿ ಚರ್ಚಿಸುತ್ತೇವೆ. ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರಿ ಮೆಡಿಕಲ್ ಕಾಲೇಜಿಗೆ ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲರು ಹೋಗುತ್ತಿಲ್ಲ. ಬೇಜವಾಬ್ದಾರಿತನ ಬಿಟ್ಟು ಸರ್ಕಾರ ತುರ್ತಾಗಿ ಈ ಬಗ್ಗೆ ಗಮನಹರಿಸಬೇಕು. ಆ ದೃಷ್ಟಿಕೋನದಿಂದ ಒತ್ತಾಯಿಸುತ್ತಿದ್ದೇವೆ ಎಂದು ವಿಜಯೇಂದ್ರ ಹೇಳಿದರು. ಪ್ರತಿ ಬಾರಿ ಬೆಳಗಾವಿಯಲ್ಲಿ ಸದನ ನಡೆಯುತ್ತದೆ. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ನಾವು ಅದರ ಬಗ್ಗೆಯೇ ಚರ್ಚೆಗೆ ರೆಡಿ ಇದ್ದೇವೆ. ಯಾಕಂದ್ರೆ ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಜನರ ನಿರೀಕ್ಷೆಗಳೂ ಅದೇ ಇರುತ್ತವೆ. ಹಾಗಾಗಿ, ಸಮಸ್ಯೆಗಳ ಚರ್ಚೆ ಆದ್ರೆ ಪರಿಹಾರ ಸಿಗುತ್ತದೆ. ಗದ್ದಲ ಗಲಾಟೆ ಆದ್ರೆ ಏನೂ ಸಿಗುವುದಿಲ್ಲ. ನಾವು ಚರ್ಚೆಯಾಗಬೇಕೆಂಬುದನ್ನು ಬಯಸ್ತೇವೆ ಎಂದು ಹೇಳಿದರು.