ಬೆಂಗಳೂರಿನ ಬಯೋ ಇನೋವೇಷನ್ ಸೆಂಟರ್‍ನಲ್ಲಿ ಭೀಕರ ಅಗ್ನಿ ಅವಘಡ.

28

ಬೆಂಗಳೂರು: ಐಟಿ-ಬಿಟಿ ಇಲಾಖೆಯ ಅಧೀನದಲ್ಲಿರುವ ಬೆಂಗಳೂರು ಬಯೋ ಇನೋವೇಷನ್ ಸೆಂಟರ್‍ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ನಿನ್ನೆ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿಯ ಬಿಹೆಚ್‍ಎಲ್ ಜಂಕ್ಷನ್ ಸಮೀಪದಲ್ಲಿರುವ ಬಿಬಿಸಿಯಲ್ಲಿ ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಸೆಂಟರ್‍ನಲ್ಲಿ ಯಾರೂ ಇರದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ವರದಿ ನೀಡಿದರು. ಅಂದಾಜು 150 ಕೋಟಿ ರೂಪಾಯಿ ಹೆಚ್ಚಿನ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ಹೇಳಲಾಗಿದೆ. ಆದರೆ, ಸ್ಪಷ್ಟತೆ ಇಲ್ಲ ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ವರದಿ ನೀಡಿದರು. ನೆಲಮಹಡಿ ಸೇರಿ 4 ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಬಿಬಿಸಿ ಕಾರ್ಯ ನಿರ್ವಹಿಸುತ್ತಿದೆ. ಬೆಳಗ್ಗೆ 5 ಗಂಟೆಗೆ ಸೆಂಟರ್‍ನ ಪ್ರಯೋಗಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್‍ಗಳು ಅಗ್ನಿ ಶಾಮಕ ನಿಯಂತ್ರಣ ಕೊಠಡಿಗೆ ತಕ್ಷಣ ವರದಿ ನೀಡಿದ್ದಾರೆ. ಪ್ರಯೋಗಾಲಯಗಳಲ್ಲಿ ವಿವಿಧ ರಾಸಾಯನಿಕ ದ್ರಾವಣ, ವಸ್ತುಗಳು, ಉಪಕರಣಗಳು, ಮಾದರಿಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಆದುದರಿಂದ ಸಮಯ ಕಳೆದಂತೆ ಕಟ್ಟಡದಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಗಿದೆ. ಆರಂಭದಲ್ಲಿ ಬೆಂಕಿ ತಹಬದಿಗೆ ತರುವುದು ಕಷ್ಟವಾದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 3 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡು ಸತತ 4 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಲಾಗಿದೆ.