ಬೆಂಗಳೂರಿನಿಂದ ಹೊರಟಿದ್ದ ಗೋ ಏರ್ ವಿಮಾನ ತುರ್ತು ಭೂಸ್ಪರ್ಶ…

71
firstsuddi

ನಾಗ್ಪರ(ಮಹಾರಾಷ್ಟ್ರ) : ಬೆಂಗಳೂರಿನಿಂದ ಬಿಹಾರದ ಪಾಟ್ನಾಗೆ ಹೊರಟಿದ್ದ ಗೋ ಏರ್ ವಿಮಾನ ಇಂದು ಬೆಳಗ್ಗೆ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಬಾಬಾ ಸಾಹೇಬ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ನಾಗ್ಪುರ್ ವಿಮಾನ ನಿಲ್ದಾಣ ಅಧಿಕಾರಿ ಅಭೀದ್ ರುಹಿ ಮಾಹಿತಿ ನೀಡಿದ್ದಾರೆ.

ಗೋ ಏರ್ ಫ್ಲೈಟ್ (ಜಿ8873) ಇಂದು ಬೆಳಗ್ಗೆ ಬೆಂಗಳೂರಿನಿಂದ ಪಾಟ್ನಾಗೆ ಹೊರಟಿತ್ತು. ಆದರೆ, ವಿಮಾನ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಇದನ್ನು ಮನಗಂಡ ಪೈಲಟ್ ನಾಗ್ಪುರ ವಿಮಾನ ನಿಲ್ದಾಣದ ಎಟಿಎಸ್ ಅನ್ನು ಸಂಪರ್ಕಿಸಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೇಳಿ ತುರ್ತು ಲ್ಯಾಡಿಂಗ್ ಮಾಡಿದ್ದಾರೆ.

ವಿಮಾನದಲ್ಲಿದ್ದ ಒಟ್ಟು 139 ಮಂದಿ ಪ್ರಯಾಣಿಕರಿದ್ದು, ಎಲ್ಲಾ ಪ್ರಯಾಣಿಕರು, ಸಿಬ್ಬಂದಿ ಮತ್ತು ಪೈಲಟ್ ಗಳು ಸುರಕ್ಷಿತವಾಗಿದ್ದಾರೆ. ಬೇರೆ ವಿಮಾನದ ಮೂಲಕ ಎಲ್ಲಾ ಪ್ರಯಾಣಿಕರನ್ನು ಪಾಟ್ನಾಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.