ಬೆಂಗಳೂರು ಟೆಕ್ ಶೃಂಗಸಭೆ 2024: ಜಾಗತಿಕ ಸಹಯೋಗಕ್ಕೆ ಈ ಸಮ್ಮಿಟ್ ವಿಶಿಷ್ಟ ವೇದಿಕೆಯಾಗಿದೆ; ಸಿಎಂ ಸಿದ್ದರಾಮಯ್ಯ. 

31

ಬೆಂಗಳೂರು: ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೃಂಗ ಎನಿಸಿರುವ ಬೆಂಗಳೂರು ಟೆಕ್ ಶೃಂಗ 2024ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆ ಮತ್ತು ಭಾರತ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಬೆಂಗಳೂರು ಟೆಕ್ ಶೃಂಗಸಭೆ 2024ರ 27ನೇ ಆವೃತ್ತಿಯನ್ನು ಆಯೋಜಿಸಲಾಗಿದೆ. ಟೆಕ್ ಅನ್ ಬೌಂಡ್ ಥೀಮ್ ನಡಿ ಅಯೋಜಿಸಲಾಗಿರುವ ಬೆಂಗಳೂರು ಟೆಕ್ ಶೃಂಗಸಭೆ 2024ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಸಿದರು, ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರು ಟೆಕ್ ಸಮ್ಮಿಟ್ – 2024 ಕಾರ್ಯಕ್ರಮದಲ್ಲಿ ನಿಮ್ಮನ್ನು ಕುರಿತು ಮಾತನಾಡುವುದು ಒಂದು ಸುಯೋಗ ಎಂದೇ ನಾನು ಭಾವಿಸಿದ್ದೇನೆ. ನಾವೀನ್ಯತೆ, ತಂತ್ರಜ್ಞಾನದ ಪ್ರಗತಿ ಮತ್ತು ಜಾಗತಿಕ ಸಹಯೋಗಕ್ಕಾಗಿ ಈ ಸಮ್ಮಿಟ್ ವಿಶಿಷ್ಟ ವೇದಿಕೆಯಾಗಿದೆ. ಭಾರತದ ತಂತ್ರಜ್ಞಾನ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. 20ನೇ ಶತಮಾನದ ಆರಂಭದಲ್ಲಿ ಬೆಂಗಳೂರು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆಯ ಕೇಂದ್ರವಾಗಿ ಬೆಳೆಯಿತು. ತನ್ಮೂಲಕ ಕೈಗಾರಿಕಾ ಬೆಳವಣಿಗೆಗೆ ಇಂಬು ನೀಡಿತು. 2000 ಇಸವಿಯ ಆರಂಭದಲ್ಲಿ ಎಸ್.ಎಂ.ಕೃಷ್ಣಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿ ಪಾರ್ಕ್ ಪ್ರಾರಂಭಿಸುವ ಮೂಲಕ ಬೆಂಗಳೂರು ಪರಿವರ್ತನೆಯ ಕಡೆಗೆ ಹೊರಳಿಕೊಂಡಿತು. ಈ ಮೂಲಕ ನಗರದ ಜಾಗತಿಕ ಟೆಕ್ ಎಂಬ ಪ್ರಖ್ಯಾತಿ ಪಡೆಯಲು ತಳಪಾಯ ಹಾಕಲಾಯಿತು. ಸಾಫ್ಟ್ ವೇರ್, ಬಯೋ ಟೆಕ್ನಾಲಜಿ, ಏರೋಸ್ಪೇಸ್ ಹಾಗು ಅಭಿವೃದ್ಧಿಗೊಂಡ ಉತ್ಪಾದನೆಯಲ್ಲಿ ತನ್ನ ಪ್ರಭಾವಕ್ಕಾಗಿ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ವಿಶ್ವದಾದ್ಯಂತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವೆಂದು ತನ್ನನ್ನು ಸ್ಥಾಪಿಸಿಕೊಂಡಿದೆ.