ಬೆಂಗಳೂರು : ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಗ್ಯಾಂಗ್ ನನ್ನು ಬಂಧಿಸಿದ್ದಾರೆ. ದೇವಿಷಣ್ಮುಗಮ್ಮ, ಮಹೇಶ್ ಕುಮಾರ್, ಜನಾರ್ಧನ್, ರಂಜನಾ ದೇವಿಪ್ರಸಾದ್, ಧನಲಕ್ಷ್ಮೀ ಬಂಧಿತ ಆರೋಪಿಗಳು. ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಕಳೆದ ವರ್ಷ ಚಾಮರಾಜಪೇಟೆ ಸರ್ಕಾರಿ ಹೆರಿಗೆ ಅಸ್ಪತ್ರೆಯೊಂದರಲ್ಲಿ ಮಗು ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಮಕ್ಕಳ ಮಾರಾಟ ದಂಧೆ ಬಗ್ಗೆ ಅರಿಯಲು ಆಸ್ಪತ್ರೆ ಹಾಗೂ ಅದರ ಸುತ್ತಮುತ್ತಲು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ನಿಗಾ ವಹಿಸಿದ್ದರು. ಈ ವೇಳೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿತರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಖಚಿತ ಮಾಹಿತಿ ಆಧರಿಸಿ ಮಕ್ಕಳ ಮಾರಾಟ ದಂಧೆಯಲ್ಲಿ ತೊಡಗಿದ್ದ ಐವರನ್ನು ಬಂಧಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದ ಆರೋಪಿಗಳು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಡ ಮಹಿಳೆಯರೇ ಇವರ ಟಾರ್ಗೆಟ್. ಹಣದಾಸೆ ತೋರಿಸಿ ಅವರಿಂದ ಮಕ್ಕಳನ್ನು ಖರೀದಿಸುತ್ತಿದ್ದರು. ಬಡತನದ ಅನಿವಾರ್ಯ ಕಾರಣಗಳಿಂದಾಗಿ ಕೆಲ ಪೋಷಕರು ಮಕ್ಕಳನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ, ಬೆಂಗಳೂರಿನಿಂದ ಚೆನ್ನೈ ಮತ್ತು ಬೆಂಗಳೂರಿನಿಂದ ಮಹಾರಾಷ್ಟ್ರ ಕಡೆಗೆ ಮಗು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತನಿಖೆ ವೇಳೆ ಓರ್ವ ಮಹಿಳೆ ಮನೆಯಲ್ಲಿ 28 ತಾಯಿ ಕಾರ್ಡ್ ಸಿಕ್ಕಿದೆ. ಸದ್ಯ ಆರೋಪಿಗಳು 18ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ 11 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.










