ಬೆಳಗಾವಿ : ಹಳ್ಳದಲ್ಲಿ ಏಳು ಭ್ರೂಣಗಳ ಮೃತದೇಹಗಳು ತೇಲಿ ಬಂದಿದ್ದು, ಇದನ್ನು ನೋಡಿದ ಜನ ಹೌಹಾರಿದ್ದಾರೆ.
ಜಿಲ್ಲೆಯ ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಹಳ್ಳದಲ್ಲಿ ಭ್ರೂಣಗಳ ಮೃತ ದೇಹಗಳು ಪತ್ತೆಯಾಗಿವೆ. ಒಟ್ಟು ಐದು ಡಬ್ಬಿಗಳಲ್ಲಿ ಏಳು ಭ್ರೂಣಗಳನ್ನು ಹಾಕಿ ಹಳ್ಳಕ್ಕೆ ಎಸೆಯಲಾಗಿದೆ. ಮೃತದೇಹಗಳನ್ನು ಯಾರು ಎಸೆದಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ(ಡಿಎಚ್ಒ) ಡಾ.ಮಹೇಶ ಕೋಣಿ ಅವರು ಮಾತನಾಡಿ, ಇದು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಗಳ ಹತ್ಯೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈಗಾಗಲೇ ಗ್ರಾಮ ಪಂಚಾಯತಿಯಿಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದೇವೆ. ಇವೆಲ್ಲವೂ ಐದು ತಿಂಗಳ ಭ್ರೂಣಗಳಾಗಿವೆ. ಕೇಸ್ ದಾಖಲಾದ ಬಳಿಕ ಅವುಗಳನ್ನ ಬೆಳಗಾವಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ಮಾಡಲಾಗುವುದು. ಭ್ರೂಣಗಳ ಹತ್ಯೆ ಕುರಿತು ತನಿಖೆಗೆ ಒಂದು ತಂಡ ಸಹ ರಚನೆ ಮಾಡಲಾಗುವುದು ಎಂದಿದ್ದಾರೆ.










