ಬೇಲ್ ಗಾಗಿ ವಕೀಲನ ಕಿಡ್ನಾಪ್ – ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿ ಕ್ರೌರ್ಯ ಮೆರೆದ ಮೂವರು ರೌಡಿಶೀಟರ್ ಗಳ ಬಂಧನ…

61
firstsuddi

ಬೆಂಗಳೂರು: ಜೈಲಿನಲ್ಲಿರುವ ತನ್ನ ಕಡೆಯ 8 ಜನರಿಗೆ ಬೇಲ್ ಕೊಡಿಸಲು ವಕೀಲರನ್ನೇ ಕಿಡ್ನಾಪ್ ಮಾಡಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ವಕೀಲ ಗಿರಧರ್ ಎಂಬುವವರನ್ನು ಅವರ ಕಾರ್‌ನಲ್ಲೇ ಅಪಹರಿಸಲಾಗಿದೆ. ಬಳಿಕ 8 ಜನರಿಗೂ ಬೇಲ್ ವ್ಯವಸ್ಥೆ ಮಾಡಬೇಕು. ಜೊತೆಗೆ 5 ಲಕ್ಷ ಹಣ ತಂದುಕೊಡುವಂತೆ ಹೇಳಿ, ಬಟ್ಟೆ ಬಿಚ್ಚಿಸಿ ಒಳ ಉಡುಪಿನಲ್ಲಿ ರಾತ್ರಿಯಿಡೀ ಕೂರಿಸಿ ಕಾರಿನ ಜಾಕ್ ರಾಡ್ ಹಾಗೂ ಸ್ಪಾನರ್ ಬಳಸಿ ಹಲ್ಲೆ ಮಾಡಲಾಗಿದೆ. ಅಲ್ಲದೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರೆ. ಬಳಿಕ ಗಿರಿಧರ್ ಅವರಿಂದ 10 ಸಾವಿರ ರೂ. ಕಸಿದುಕೊಂಡು ಅವರನ್ನು ಕಳಿಸಿದ್ದಾರೆ.

ಈ ಸಂಬಂಧ ರೌಡಿಶೀಟರ್ ಗಳಾದ ರಾಜೇಶ್ ಅಲಿಯಾಸ್ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆಪಲ್, ಜಾನ್ ಹಾಗೂ ಭರತ್ ವಿರುದ್ಧ ವಕೀಲ ಗಿರಧರ್ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.