ಯಾದಗಿರಿ: ಜಿಲ್ಲೆಯಲ್ಲಿ ನಡೆದ ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಓರ್ವ ಅಭ್ಯರ್ಥಿ ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಆರೋಪಿಯನ್ನು ಅಫಜಲಪುರದ ಸೊನ್ನಾ ಗ್ರಾಮದ ಪುಟ್ಟು ಎಂದು ಗುರುತಿಸಲಾಗಿದೆ. ಈತನಿಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಬ್ಬರ ಹೆಸರನ್ನು ಬಹಿರಂಗ ಪಡಿಸಿಲ್ಲ. ಆರೋಪಿ ಬ್ಲೂಟೂತ್ ಬಳಸಿಕೊಂಡು ಪರೀಕ್ಷೆ ಬರೆಯುತ್ತಿದ್ದ. ಈ ವೇಳೆ ವಿಚಾರಣೆ ನಡೆಸಿದಾಗ ಆತ ನಕಲಿ ಅಭ್ಯರ್ಥಿ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಯಾದಗಿರಿ ನಗರ ಠಾಣೆಗೆ ಕರೆತಂದು ಎಸ್‍ಪಿ ನೇತೃತ್ವದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಪಿಎಸ್ಐ ಹಗರಣ ಕಿಂಗ್‍ಪಿನ್ ಆರ್.ಟಿ ಪಾಟೀಲ್ ಗ್ರಾಮದವರು ಎಂದು ತಿಳಿದು ಬಂದಿದೆ.
ಸೀನಿಯರ್ ಅಸಿಸ್ಟೆಂಟ್ ಹುದ್ದೆ, ಫುಡ್ ಕ್ಯಾಟಗೇರಿಜೇಷನ್ ಸಿಸ್ಟಮ್ ನ ಸೀನಿಯರ್ ಅಸಿಸ್ಟೆಂಟ್ ಸೇರಿ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಹುದ್ದೆ ಭರ್ತಿಗಾಗಿ ಪರೀಕ್ಷೆ ನಡೆಯುತ್ತಿದ್ದು, ಯಾದಗಿರಿ ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ 7,884 ಅಭ್ಯರ್ಥಿಗಳು ಕೆಪಿಎಸ್‍ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಈಗಾಗಲೇ ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ಕ್ರಮ ಇದ್ದರೂ ಆರೋಪಿಗಳು ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುವ ತಂತ್ರ ರೂಪಿಸಿದ್ದರು.










