ಬ್ಲ್ಯಾಕ್ ಮೇಲ್ ,ಹನಿ ಟ್ರ್ಯಾಪ್ ಪ್ರಕರಣ – ಇಬ್ಬರ ಬಂಧನ…

109
firstsuddi

ಮಂಗಳೂರು : ಬ್ಲ್ಯಾಕ್ ಮೇಲ್ ಮತ್ತು ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿದ್ದ ಅಝ್ವೀನ್ ಸಿ ಎಂ (24) ಮತ್ತು ಹತೀಜಮ್ಮ ಯಾನೆ ಸಪ್ನಾ (23) ಎಂದು ಗುರುತಿಸಲಾಗಿದೆ. ಈ ಇಬ್ಬರು ಕೇರಳ ಮೂಲದವರಾಗಿದ್ದಾರೆ.

ಜುಲೈ 19 ರಂದು ರಾತ್ರಿ 8: 30 ರ ಸುಮಾರಿಗೆ ಈ ಜೋಡಿ ನೆರೆಮನೆಯ ಯುವಕನ ಮನೆಗೆ ಬಂದು ಪಾರ್ಟಿ ಮಾಡೋಣ ಎಂದು ಹೇಳಿದ್ದಾರೆ. ಯುವಕ ಅದಕ್ಕೆ ಒಪ್ಪಿದ್ದಾನೆ. ಈ ವೇಳೆ ಜ್ಯೂಸ್ ನಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿ ಯುವಕನಿಗೆ ಕೊಟ್ಟಿದ್ದಾರೆ. ಬಳಿಕ ಮೂರ್ಚೆ ತಪ್ಪಿದ ಯುವಕ ಎಚ್ಚರಗೊಂಡು ನೋಡಿದಾಗ ಕೈಯಲ್ಲಿದ್ದ ರಿಂಗ್ ಮತ್ತು ಬೀರುವಿನಲ್ಲಿದ್ದ 2.12 ಲಕ್ಷ ರೂ ಮಂಗಮಾಯವಾಗಿದೆ.

ಮರುದಿನ ಯುವಕ ಜೋಡಿಯ ಮನೆಗೆ ಕೇಳಲು ಹೋದಾಗ ಹಣ ತೆಗೆದುಕೊಂಡಿಲ್ಲ ಎಂದಿದ್ದಾರೆ. ಇದನ್ನು ನಂಬದ ಯುವಕ ಪೊಲೀಸರಿಗೆ ತಿಳಿಸುತ್ತೇನೆ ಎಂದಾಗ ನಾಳೆ ನಿಮ್ಮ ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಇದಾದ ನಂತರ ಈ ಜೋಡಿ ಆತನ ಮನೆಗೆ ಬಂದು ಅವರ ಮೊಬೈಲ್ ನಲ್ಲಿದ್ದ ಯುವಕನ ನಗ್ನ ಫೋಟೋ ಮತ್ತು ವಿಡಿಯೋ ತೋರಿಸಿ ನಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿದರೆ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ತನ್ನ ಸಹೋದರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ತನ್ನ ಸಹೋದರಿಯ ಮೂಲಕ ಸುಳ್ಳು ದೂರು ನೀಡುವುದಾಗಿ ಆರೋಪಿ ಅಜ್ವೀನ್ ಬೆದರಿಕೆ ಹಾಕಿದ್ದಾನೆ.

ಇದರಿಂದ ತಬ್ಬಿಬ್ಬಾದ ಯುವಕ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ ಇಬ್ಬರನ್ನೂ ಬಂಧಿಸಲಾಗಿದ್ದು, ಅವರ ಬಳಿ ಇದ್ದ ಮೊಬೈಲ್ ಫೋನ್ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.