ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನನ್ನು ಕಳೆದ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಭಾರತಿ ಕಾಲನಿಯಲ್ಲಿ ನಡೆದಿದೆ. ಪರಿಣಾಮ, ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ(ಸಿಆರ್‌ಪಿಸಿ ಸೆಕ್ಷನ್ 144) ಜಾರಿಗೊಳಿಸಲಾಗಿದೆ.
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಗರದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಭಾರತಿ ಕಾಲೊನಿ ಬಡಾವಣೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದರು. ಕಾರಿನಲ್ಲಿ ಬಂದಿದ್ದ 4ರಿಂದ 6 ಜನರ ಗುಂಪು, ಭಜರಂಗದಳ ಕಾರ್ಯಕರ್ತ ಹರ್ಷ ಮೇಲೆ ಮಾರಕಾಸ್ತ್ರಗಳಿಂದ ಚುಚ್ಚಿ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಷ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿಸಿತಾದರೂ ಚಿಕಿತ್ಸೆ ಫಲಿಸದೇ ಹರ್ಷ ಪ್ರಾಣಬಿಟ್ಟಿದ್ದಾನೆ.
ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಸದ್ಯ ಬಿಗುವಿನ ವಾತಾವರಣವಿದೆ. ಸೀಗೆಹಟ್ಟಿ ಭಾಗದಲ್ಲಿ ಕಲ್ಲು ತೂರಾಟ ನಡೆಯುತ್ತಿದ್ದು, ಸ್ಥಳಕ್ಕೆ ಪೂರ್ವ ವಲಯ ಡಿಐಜಿ ತ್ಯಾಗರಾಜನ್ ಹಾಗೂ ಎಸ್ಪಿ ಲಕ್ಷ್ಮಿಪ್ರಸಾದ್ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ. ಇನ್ನೂ ಮುಂಜಾಗ್ರತಾ ಕ್ರಮವಾಗಿ ಇಂದು ನಗರದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.










