ನವದೆಹಲಿ : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸದಲ್ಲಿ ಇದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇಂದು ನವದೆಹಲಿಯಲ್ಲಿ ಸುದೀರ್ಘ ಮಾತುಕತೆ ನಡೆಸಿದರು. ರಕ್ಷಣಾ ಕ್ಷೇತ್ರ, ವ್ಯಾಪಾರ ಹಾಗೂ ಸ್ವಚ್ಛ ಇಂಧನದಲ್ಲಿ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಚರ್ಚೆಯಾಗಿದೆ.
ಇದೇ ವೇಳೆ ಬೋರಿಸ್ ಜಾನ್ಸನ್ ಅವರು, ಭಾರತದ ಕೋವಿಡ್ ವ್ಯಾಕ್ಸಿನ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ. ಅದು ನನಗೆ ಒಳ್ಳೆಯದನ್ನು ಮಾಡಿದೆ. ನಾನು ಭಾರತಕ್ಕೆ ಧನ್ಯವಾದ ಹೇಳುತ್ತೇನೆ. ನನ್ನ ವಿಶೇಷ ಗೆಳಯ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇಂದು ನಾವು ಹೊಸ ಮತ್ತು ವಿಸ್ತರಿತ ರಕ್ಷಣಾ ಹಾಗೂ ಭದ್ರತಾ ಪಾಲುದಾರಿಕೆಯನ್ನು ಒಪ್ಪಿಕೊಂಡಿದ್ದೇವೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ಹಿಂದೆಂದಿಗಿಂತಲೂ ಈಗ ಸಂಬಂಧ ಉತ್ತಮವಾಗಿದೆ. ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ(ರಕ್ಷಣೆಯಲ್ಲಿ) ಅನ್ನು ಬೆಂಬಲಿಸಲು ದಶಕಗಳ ಬದ್ಧತೆಯನ್ನು ಹೊಂದಿದ್ದೇವೆ ಎಂದು ಬೋರಿಸ್ ಜಾನ್ಸನ್ ಹೇಳಿದರು.










