ಭಾರತದಲ್ಲಿ ಪತ್ತೆಯಾದ ಕೊರೊನಾ ರೂಪಾಂತರಗಳಿಗೆ ‘ಕಪ್ಪಾ, ಡೆಲ್ಟಾ’ ಎಂದು ನಾಮಕರಣ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ…

75
firstsuddi

ಜಿನಿವಾ : ಭಾರತದಲ್ಲಿ ಪತ್ತೆಯಾದ ಕೊರೊನಾ ರೂಪಾಂತರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ‘ಕಪ್ಪಾ ಮತ್ತು ಡೆಲ್ಟಾ’ ಎಂದು ನಾಮಕರಣ ಮಾಡಿದೆ.

ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್ ಬಿ .1.617.1 ರೂಪಾಂತರಕ್ಕೆ ‘ಕಪ್ಪಾ’ ಹಾಗೂ ಬಿ .1.617.2 ರೂಪಾಂತರಕ್ಕೆ ‘ಡೆಲ್ಟಾ’ ಎಂದು ಹೆಸರಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಓ) ಘೋಷಣೆ ಮಾಡಿದೆ. ಈ ಮೊದಲು ಆಯಾ ದೇಶಗಳಲ್ಲಿ ಹೊಸ ರೂಪ ಪಡೆದ ಕೊರೊನಾ ವೈರಸ್ಗೆ ಬ್ರಿಟನ್ ವೇರಿಯಂಟ್, ದಕ್ಷಿಣ ಆಫ್ರಿಕಾ ವೇರಿಯಂಟ್, ಬಿ .1.617.1 ಗೆ ‘ಇಂಡಿಯನ್ ವೇರಿಯಂಟ್’ ಎಂದು ಕರೆಯಲಾಗುತ್ತಿತ್ತು.

ಈ ಬಗ್ಗೆ ಟ್ವೀಟ್ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ ,”ಕೋವಿಡ್-19 ರೂಪಾಂತರಗಳಿಗೆ ಹೊಸ ಹೆಸರನ್ನು ನಾವು ಘೋಷಿಸುತ್ತಿದ್ದೇವೆ. ಈ ಲೇಬಲ್ ಗಳು ಗ್ರೀಕ್ ವರ್ಣಮಾಲೆಯನ್ನು ಆಧರಿಸಿವೆ. ಇವು ರೂಪಾಂತರಗಳನ್ನು ಉಚ್ಛರಿಸಲು, ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗುತ್ತದೆ” ಎಂದು ಟ್ವೀಟ್ ಮಾಡಿದೆ.

ಬಿ .1.617.1 ರೂಪಾಂತರವನ್ನು ‘ಇಂಡಿಯನ್ ವೆರಿಯಂಟ್’ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುತ್ತಿದ್ದ ಬಗ್ಗೆ ಮೇ 12 ರಂದು, ಕೇಂದ್ರ ಆರೋಗ್ಯ ಸಚಿವಾಲಯವು ಆಕ್ಷೇಪ ವ್ಯಕ್ತಪಡಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಯಾವುದೇ ವರದಿಯಲ್ಲಿ ಕೊರೊನಾ ವೈರಸ್ ನ ಬಿ.1.617.1 ರೂಪಾಂತರಕ್ಕೆ ‘ಇಂಡಿಯನ್ ವೇರಿಯಂಟ್’ ಎಂಬ ಹೆಸರು ನೀಡಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿತ್ತು.