ಮಂಡ್ಯ : ಈಜಲು ಹೋಗಿ ಐವರು ನೀರುಪಾಲು…

69
firstsuddi

ಮಂಡ್ಯ : ಬೇಸಿಗೆ ರಜೆ ಹಿನ್ನೆಲೆ ಅಜ್ಜಿ ಮನೆಗೆ ಬಂದಿದ್ದ ಐವರು ನಾಲೆಗೆ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ತಾಲೂಕಿನ ದೊಡ್ಡಕೊತ್ತಗೆರೆ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಮೆಹತಾ (10), ಅನಿಷಾ ಬೇಗಂ (34), ತಸ್ಮಿಯಾ (22), ಅಶ್ರಕ್ (28), ಅತೀಕ್ (22) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಬೆಂಗಳೂರಿನ ನೀಲಸಂದ್ರ ಮೂಲದ ನಿವಾಸಿಗಳಾಗಿದ್ದು, ಬೇಸಿಗೆ ರಜೆ ಹಿನ್ನೆಲೆ ಹಲ್ಲೆಗೆರೆಯ ಅಜ್ಜಿ ಮನೆಗೆ ಬಂದಿದ್ದರು.

ಇಂದು ದೊಡ್ಡ ಕೊತ್ತಗೆರೆ ಬಳಿಯ ವಿಶ್ವೇಶ್ವರಯ್ಯ ನಾಲೆಗೆ ಈಜಲು ಬಂದಿದ್ದರು. ಈ ವೇಳೆ ಬಾಲಕನೋರ್ವ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬಾಲಕನ ರಕ್ಷಣೆಗೆಂದು ಹೋದ ನಾಲ್ವರು ಕೂಡ ನೀರುಪಾಲಾಗಿದ್ದಾರೆ. ಸದ್ಯ ಮೂವರ ಶವ ಪತ್ತೆಯಾಗಿದ್ದು, ಇನ್ನಿಬ್ಬರ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ಸಿಬ್ಬಂದಿ, ನುರಿತ ಈಜುಗಾರರಿಂದ ಶವಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಘಟನೆ ಸಂಬಂಧ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.