ಕೊಡಗು : ಮದ್ಯದ ಅಮಲಿನಲ್ಲಿ ಹೆತ್ತ ತಂದೆ ತಾಯಿಯನ್ನೇ ದೊಣ್ಣೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ನಾಪೋಕ್ಲು ತಾಲ್ಲೂಕಿನ ಕೋಕೇರಿ ಗ್ರಾಮದಲ್ಲಿ ನಡೆದಿದೆ. ರಾಜು(70) ಹಾಗೂ ಗೌರಿ(65) ಮೃತ ದಂಪತಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಅಯ್ಯಪ್ಪ ಎಂದು ಗುರುತಿಸಲಾಗಿದೆ. ಮೃತ ದಂಪತಿ ಗ್ರಾಮದ ಶಿವಾಜಿ ಸೋಮಯ್ಯ ಎಂಬುವವರ ಮನೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ನಿನ್ನೆ ರಾತ್ರಿ ಕುಡಿದು ಬಂದ ಮಗ ಕ್ಷುಲ್ಲಕ ಕಾರಣಕ್ಕೆ ಹೆತ್ತ ತಂದೆ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಾಪೋಕ್ಲು ಠಾಣಾ ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ.










