- ಡಿ.ಆರ್.ಸುಬ್ರಹ್ಮಣ್ಯ
ಚಿಕ್ಕಮಗಳೂರು : ಪಿಂಚಣಿದಾರರು ಇನ್ನು ಮುಂದೆ ತಮ್ಮ ಮನೆ ಬಾಗಿಲಲ್ಲೇ ಜೀವನ ಪ್ರಮಾಣ ಪತ್ರ (ಲೈಫ್ ಸರ್ಟಿಫಿಕೇಟ್) ಪಡೆಯಬಹುದು. ಇದಕ್ಕೆ ಅಂಚೆ ಇಲಾಖೆ ಹೊಸ ಯೋಜನೆ ರೂಪಿಸಿದ್ದು ಇದರಿಂದಾಗಿ ಪಿಂಚಣಿದಾರರ ಶ್ರಮ. ಹಣ ಹಾಗೂ ಸಮಯ ಉಳಿತಾಯವಾಗಲಿದೆ.
ಅಂಚೆ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣ ಡಿಜಿಟಲೀಕರಣದತ್ತ ಸಾಗುತ್ತಿದ್ದು ಹೊಸ ಹೊಸ ಸೇವೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಆ ಮೂಲಕ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುತ್ತಿದೆ. ಅದರ ಮತ್ತೊಂದು ರೂಪವೇ ಜೀವನ ಪ್ರಮಾಣ ಪತ್ರ ವಿತರಣೆ. ಇನ್ನು ಮುಂದೆ ಅಂಚೆಯಣ್ಣನೇ ಮನೆ ಬಾಗಿಲಿಗೆ ಬಂದು ಜೀವನ ಪ್ರಮಾಣ ಪತ್ರ ನೀಡಲಿದ್ದಾನೆ.
ಅಂಚೆ ಇಲಾಖೆ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಮೂಲಕ ಜೀವಿತ ಪ್ರಮಾಣ ಪತ್ರ ವಿತರಣೆಗೆ ಕೇಂದ್ರ ಸರ್ಕಾರ ವ್ಯವಸ್ಥೆ ಕಲ್ಪಿಸಿದೆ ಈಗಾಗಲೇ ಅದು ಜಾರಿಗೆ ಬಂದಿದೆ. ಇದರಿಂದ ವರ್ಷಕ್ಕೊಮ್ಮೆ ಬ್ಯಾಂಕಿಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸುವವರ ಕೆಲಸ ಸುಲಭವಾಗಲಿದೆ.
ವಯೋವೃದ್ಧ ಪಿಂಚಣಿದಾರರಿಗೆ ವರ್ಷಕ್ಕೊಮ್ಮೆ ಪಿ.ಎಫ್ ಕಛೇರಿಗೆ ಹೋಗಿ ಬರುವುದೂ ಸಮಸ್ಯೆ. ಜೊತೆಗೆ ಸಹಾಯಕರೊಬ್ಬರನ್ನು ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ. ಕೊರೊನಾ ಕಾಲದಲ್ಲಿ ವಯಸ್ಸಾದವರು ಜನಸಂದಣಿ ಇರುವ ಪ್ರದೇಶದಲ್ಲಿ ಸಂಚರಿಸುವುದು ಸುರಕ್ಷಿತವೂ ಅಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಸಮರ್ಪಕವಾಗಿ ಇಲ್ಲದ ಕಾರಣ ಬಾಡಿಗೆ ವಾಹನ ಮಾಡಿಕೊಂಡು ತೆರಳಬೇಕು. ಅದರಲ್ಲೂ ಜಿಲ್ಲೆಯ ಯಾವುದೋ ಮೂಲೆಯ ಗ್ರಾಮೀಣ ಭಾಗದ ಪಿಂಚಣಿದಾರರು ಇದಕ್ಕೆಂದು ಹೆಚ್ಚು ಹಣ ವ್ಯಯ ಮಾಡಬೇಕು. ಇದಲ್ಲೆದಕ್ಕೂ ಹೊಸ ವ್ಯವಸ್ಥೆಯಿಂದ ಪರಿಹಾರ ಸಿಕ್ಕಂತಾಗಿದೆ.
ಏನಿದು ಪ್ರಮಾಣ ಪತ್ರ ?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿವೃತ್ತ ನೌಕರರು ಪಿಂಚಣಿ ಪಡೆಯಲು ವರ್ಷಕ್ಕೊಮ್ಮೆ ನಾನು ಜೀವಂತವಾಗಿದ್ದೇನೆ ಎಂಬುದನ್ನು ಸಂಬಂಧಪಟ್ಟ ಇಲಾಖೆಗೆ ದೃಢೀಕರಿಸುವುದನ್ನೇ ಜೀವನ ಪ್ರಮಾಣ ಪತ್ರ ಎನ್ನಲಾಗುತ್ತದೆ.
ನಿಗಧಿತ ಸಮಯದಲ್ಲಿ ಪ್ರಮಾಣ ಪತ್ರ ಸಲ್ಲಿಸದೇ ಇದ್ದರೆ ಪಿಂಚಣಿದಾರರ ಖಾತೆಗೆ ಹಣ ಜಮೆಯಾಗುವುದಿಲ್ಲ. ಒಂದು ವೇಳೆ ಪ್ರಮಾಣ ಪತ್ರ ಸಲ್ಲಿಸುವುದು ಒಂದು ತಿಂಗಳು ತಡವಾದರೂ ಆ ತಿಂಗಳ ಪಿಂಚಣಿ ಹಣವನ್ನು ತಡೆ ಹಿಡಿಯಲಾಗುತ್ತದೆ.
ಹೇಗೆ ದೊರೆಯಲಿದೆ ಸೇವೆ
ಅಂಚೆ ಪೇದೆಗಳ ಬಳಿಯಿರುವ ಮೈಕ್ರೋ ಎಟಿಎಂ ಯಂತ್ರದ ಮೂಲಕ ಜೀವನ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ. ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ ಈ ಸೇವೆ ಸುಲಭವಾಗಿ ಸಿಗುತ್ತದೆ.
ಬಯೋಮೆಟ್ರಿಕ್ ಮೂಲಕ ಪಿಂಚಣಿದಾರರ ಮನೆ ಬಾಗಿಲಲ್ಲೇ ಅವರ ಹೆಬ್ಬೆಟ್ಟಿನ ಮಾದರಿಯನ್ನು ಪಡೆದು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗುತ್ತದೆ. ಇದರಿಂದಾಗಿ ಮುಂದಿನ ಒಂದು ವರ್ಷ ಪಿಂಚಣಿದಾರರ ಖಾತೆಗೆ ಪಿಂಚಣಿ ಹಣ ಜಮೆಯಾಗುತ್ತದೆ ಎನ್ನುತ್ತಾರೆ ಅಂಚೆ ಅಧೀಕ್ಷಕ ಬಿ.ಶಂಕರ.
ಹೊಸದಾಗಿ ಜೀವನ ಪ್ರಮಾಣ ಪತ್ರವನ್ನು ಪಡೆಯುವವರು ಪಿಂಚಣಿ ಗುರುತಿನ ಚೀಟಿ. ಪಿಂಚಣಿ ಪೇಮೆಂಟ್ ಆರ್ಡರ್. ಬ್ಯಾಂಕ್ ಖಾತೆಯ ವಿವರ. ಮೊಬೈಲ್ ಮತ್ತು ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ವ್ಯವಸ್ಥಾಪಕರು. ಪೋಸ್ಟಲ್ ಪೇಮೆಂಟ್ಸ್ ಬ್ಯಾಂಕ್. ಪ್ರಧಾನ ಅಂಚೆ ಕಛೇರಿ. ಮೊ: 8618034580 ಚಿಕ್ಕಮಗಳೂರು ಇವರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.










