ಮಳೆಯಾಗಲೆಂದು ಬಾಲಕಿಯರ ಬೆತ್ತಲೆ ಮೆರವಣಿಗೆ – ಇಲ್ಲಿನ ಜನರ ವಿಚಿತ್ರ ಮೂಢನಂಬಿಕೆ!

65
firstsuddi

ದಾಮೋಹ್(ಮಧ್ಯಪ್ರದೇಶ) : ಕೆಲವು ಮೂಢನಂಬಿಕೆಗಳನ್ನು, ಮೂಢ ಆಚರಣೆಗಳನ್ನು ಜನರು ಬಿಡೋದಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಗ್ರಾಮೀಣ ಭಾಗದ ಜನರು ಮಳೆಯಾಗಲೆಂದು ಹರೆಯದ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ.

ದಾಮೋಹ್ ಜಿಲ್ಲೆಯಿಂದ 50 ಕಿಮೀ ದೂರದಲ್ಲಿರುವ ಬನಿಯಾ ಎಂಬ ಗ್ರಾಮದಲ್ಲಿ ಭಾನುವಾರ ರಾತ್ರಿ ಹೀಗೊಂದು ಆಚರಣೆ ನಡೆದಿದೆ. ಸ್ಥಳೀಯರ ನಂಬಿಕೆಯ ಆಚರಣೆ ಇದಾಗಿದ್ದು, ಹದಿಹರೆಯದ ಹುಡುಗಿಯರು ತಮ್ಮ ಭುಜದ ಮೇಲೆ ಮರದ ಈಟಿಯನ್ನು ಹೊತ್ತುಕೊಂಡು ಮೆರವಣಿಗೆ ಮಾಡಬೇಕು. ಆ ಮರದ ಈಟಿಯ ಮೇಲೆ ಕಪ್ಪೆಯನ್ನು ಕಟ್ಟಿಡಲಾಗುತ್ತದೆ. ಹೀಗೆ ಬೆತ್ತಲೆ ಹೊರಟ ಹುಡುಗಿಯರೊಟ್ಟಿಗೆ ಮಹಿಳೆಯರು ಕೂಡ ಹೆಜ್ಜೆಹಾಕಬೇಕು ಮತ್ತು ಅವರು, ವರುಣನನ್ನು ಹೊಗಳುವ, ಓಲೈಸುವ ಭಜನೆಗಳನ್ನು ಹಾಡುತ್ತಿರಬೇಕು.

ಮಳೆಯಾಗದಿದ್ದರೆ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವುದು ಉಂಟು, ಕೆಲವು ಹೋಮ-ಹವನಾದಿಗಳನ್ನು ಮಾಡುವುದೂ ಇದೆ. ಆದರೆ ಹೀಗೆ ಹೆಣ್ಣು ಮಕ್ಕಳನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದು ತೀರ ಹೀನ ಕೃತ್ಯವಾಗಿದ್ದು, ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.