ಮುಂಬೈ : ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಸಿಲಿನ ತಾಪಕ್ಕೆ 11 ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರ ಸರ್ಕಾರ ನಾಗರಿಕರ ಸಮಾಜ ಸೇವೆ ಪರಿಗಣಿಸಿ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿಯನ್ನು ನೀಡುತ್ತದೆ. ಅದರಂತೆ ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಾಗೂ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಿನ್ನೆ ಬೆಳಗ್ಗೆ 11.30ಕ್ಕೆ ಆರಂಭವಾದ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಯವರೆಗೂ ನಡೆಯಿತು.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಕ್ಷಿಸಲು ಸಾವಿರಾರು ಜನರು ಭಾಗಿಯಾಗಿದ್ದರು. ಆದರೆ ಪ್ರೇಕ್ಷಕರಿಗೆ ಯಾವುದೇ ರೀತಿಯ ಆಸನ ವ್ಯವಸ್ಥೆಯಾಗಲಿ ಹಾಗೂ ಶೆಡ್ ಗಳ ವ್ಯವಸ್ಥೆಯೂ ಇರಲಿಲ್ಲ. ಇವೆಲ್ಲದರ ಮಧ್ಯೆ ದಿನದ ತಾಪಮಾನ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ಬಿಸಿಲಿನ ಝಳ ತಾಳಲಾರದೇ ಕಾರ್ಯಕ್ರಮದಲ್ಲಿ ನೆರೆದಿದ್ದ 11 ಮಂದಿ ಸಾವನ್ನಪ್ಪಿದ್ದು, 50 ಮಂದಿ ವಿವಿಧ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಆಸ್ಪತ್ರೆಗೆ ತೆರಳಿದ್ದು, ರೋಗಿಗಳಿಗೆ ಧೈರ್ಯ ತುಂಬಿದ್ದಾರೆ. ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು.










