ಮಹಿಳೆಯರಿಗಾಗಿ ಶೇ.33ರಷ್ಟು ಸರ್ಕಾರಿ ಉದ್ಯೋಗ ಮೀಸಲು – ಅಮಿತ್ ಶಾ.

59
firstsuddi

ಅಗರ್ತಲಾ : ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತ್ರಿಪುರಾದಲ್ಲಿ ಶೇ. 33ರಷ್ಟು ಸರ್ಕಾರಿ ಉದ್ಯೋಗಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗುವುದು ಎಂದು ಘೋಷಿಸಿದ್ದಾರೆ.

ಈಶಾನ್ಯ ರಾಜ್ಯದಲ್ಲಿ ಬಿಜೆಪಿ-ಐಪಿಎಫ್ಟಿ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಅಗರ್ತಲಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು 200 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತೇವೆ. ರಾಜ್ಯದ ಯುವಜನರಿಗಾಗಿ ಕೇವಲ 4 ವರ್ಷಗಳಲ್ಲಿ ಪ್ರತಿ ವ್ಯಕ್ತಿಯ ಆದಾಯವು 13% ರಿಂದ 1.30 ಲಕ್ಷಕ್ಕೆ ಏರಿದೆ ಎಂದು ಹೇಳಿದರು.

ತ್ರಿಪುರಾದ ಸರ್ಕಾರದ ಅಡಿಯಲ್ಲಿ ರೈತರ ಆದಾಯವು ದ್ವಿಗುಣಗೊಂಡಿದೆ ಮತ್ತು ತಲಾ ಆದಾಯವು 1.3 ಲಕ್ಷ ರೂ.ಗೆ ಏರಿಕೆಯಾಗಿದೆ. ರೈಲಿನ ಮೂಲಕ ಅಗರ್ತಲಾವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲಾಗಿದೆ. ಒಟ್ಟು 542 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ತ್ರಿಪುರಾದಲ್ಲಿ ಘೋರ ಅಪರಾಧಗಳಲ್ಲಿ ಶೇ. 30ರಷ್ಟು ಇಳಿಕೆಯಾಗಿದೆ ಮತ್ತು ಶಿಕ್ಷೆಯ ಪ್ರಮಾಣವು ಶೇ. 5ರಿಂದ ಶೇ. 53ಕ್ಕೆ ಏರಿದೆ. ಹಿಂದಿನ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಆಡಳಿತ ವ್ಯವಸ್ಥೆಯು ಈಡೇರಿಸುತ್ತದೆ. ಮತ ಕೇಳಲು ಮತ್ತೆ ತ್ರಿಪುರಾಕ್ಕೆ ಬರುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.