ಮೀನೂಟ ಸವಿದು ದೇವಸ್ಥಾನಕ್ಕೆ ಭೇಟಿ ನೀಡಿದ ಸಿ.ಟಿ ರವಿ – ಫೋಟೋ ವೈರಲ್…

71
firstsuddi

ಕಾರವಾರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮೀನೂಟ ಸವಿದು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.

ಫೆ.19ರ ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಸಿ.ಟಿ ರವಿ ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ಭಟ್ಕಳಕ್ಕೆ ಆಗಮಿಸಿದ್ದರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಮೀನೂಟ ಸೇವಿಸಿದ್ದ ಸಿ.ಟಿ ರವಿ ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಭೇಟಿ ನೀಡಿದ್ದಾರೆ.

ನಾಗಬನದ ಬಾಗಿಲು ಹಾಕಿದ್ದರಿಂದ ಗೇಟ್ ಮುಂಭಾಗದಲ್ಲಿ ದೇವರಿಗೆ ಸಿ.ಟಿ.ರವಿ ನಮಸ್ಕಾರ ಸಲ್ಲಿಸಿದ್ದರು. ನಂತರ ಗೇಟ್ ಮುಂಭಾಗದಲ್ಲಿಯೇ ಶಾಸಕ ಸುನಿಲ್ ನಾಯ್ಕ್ ಹಾಗೂ ಕಮಿಟಿ ಸದಸ್ಯರು ಸಿ.ಟಿ.ರವಿ ಅವರನ್ನು ಸನ್ಮಾನಿಸಿದ್ದರು. ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋದರು ಎಂದು ವಿವಾದ ಮಾಡಿದ ಬಿಜೆಪಿಗರು ಈಗೆಲ್ಲಿ ಹೋದರು ಎಂದು ಕಾಂಗ್ರಸಿಗರು ಪ್ರಶ್ನೆ ಮಾಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ರವಿ ಅವರು ಧರ್ಮದ ಆಚಾರ, ವಿಚಾರಗಳು ಹಾಗೂ ಸಂಪ್ರದಾಯವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.