ಮುರುಘಾ ಮಠದಲ್ಲಿ ಹೆಣ್ಣು ಮಗು ಪತ್ತೆ…

61
firstsuddi

ಚಿತ್ರದುರ್ಗ : ಮುರುಘಾ ಮಠದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ. ಮಠದ ವಸತಿ ಶಾಲೆಯಲ್ಲಿ ಅನಧಿಕೃತವಾಗಿ ಪುಟ್ಟ ಹೆಣ್ಣು ಮಗುವನ್ನು ಇರಿಸಲಾಗಿತ್ತು ಎಂಬಂಶ ಬಯಲಾಗಿದ್ದು, ಈ ಕುರಿತಾಗಿ ಅನೇಕ ಅನುಮಾನಗಳು ಹುಟ್ಟುಕೊಂಡಿವೆ.

ಈ ಬಗ್ಗೆ ಮುರುಘಾಮಠದ ಎದುರಿನ ಟೀಸ್ಟಾಲ್ ಮಹಿಳೆ ಫೈರೋಜಾ ಹೇಳಿಕೆ ನೀಡಿದ್ದು, ನಾಲ್ಕೂವರೆ ವರ್ಷದ ಹಿಂದೆ ಮಠದ ಮುಂದಿನ ರಸ್ತೆ ಬಳಿ ನಾಲ್ಕು ದಿನದ ಮಗು ಪತ್ತೆ ಆಗಿತ್ತು. ಅದು ತುಂಬಾ ಅಳುತ್ತಿತ್ತು. ಆ ವೇಳೆ ನಾನು ಹೋಗಿದ್ದೆ, ಮಠದ ಸಿಬ್ಬಂದಿಯೂ ಇದ್ದರು. ಆ ಮಗುವಿನ ಬಳಿ ಪತ್ರವಿತ್ತು. ಅದರಲ್ಲಿ ಮಗುವನ್ನು ಮಠಕ್ಕೆ ನೀಡುವಂತೆ ಬರೆಯಲಾಗಿತ್ತು.

ಮಠದ ಸಿಬ್ಬಂದಿ ಪತ್ರವನ್ನು ತೆಗೆದುಕೊಂಡು ಮಠಕ್ಕೆ ಹೋದರು. ನಂತರ ಮಗುವನ್ನು ನಾನು ತೆಗೆದುಕೊಂಡು ಬಂದೆ. ಅಲ್ಲೇ ಸ್ಥಳೀಯರೆಲ್ಲರೂ ಮಗುವನ್ನು ತನಗೆ ನೀಡುವಂತೆ ಕೇಳಿಕೊಂಡರು. ಆದರೆ ನಾನು ಕೊಟ್ಟಿರಲಿಲ್ಲ. ಆದರೆ ಸ್ವಾಮೀಜಿ, ಮಠದ ಸಿಬ್ಬಂದಿಯನ್ನು ಇಲ್ಲಿ ಕಳುಹಿಸಿ, ಮಗುವನ್ನು ತೆಗೆದುಕೊಂಡು ಹೋದರು.

ಈ ಹಿನ್ನೆಲೆಯಲ್ಲಿ ಸ್ಥಳೀಯರು ಮಗುವನ್ನು ಕೊಡುವಂತೆ ಮಠಕ್ಕೆ ಹೋಗಿ ಕೇಳಿದ್ದಾರೆ. ಆಗ ಸ್ವಾಮೀಜಿ ಸ್ಥಳೀಯರ ಹತ್ತಿರ ಆಸ್ತಿ ಏನಾದರೂ ಇದ್ದರೇ ಅದನ್ನು ಮಗುವಿನ ಹೆಸರಿಗೆ ಬರೆಸಿ, ಆಗ ಮಗುವನ್ನು ಕೊಡುತ್ತೇವೆ ಎಂದು ತಿಳಿಸಿದ್ದರು. ಆಗಿನಿಂದ ಮಗು ಮಠದಲ್ಲಿ ಚೆನ್ನಾಗಿಯೇ ಬೆಳೆಯುತ್ತಿದೆ ಎಂದು ಹೇಳಿದರು.

ಒಟ್ಟಾರೆಯಾಗಿ ಮುರುಘಾ ಮಠದಲ್ಲಿ ಅಕ್ರಮವಾಗಿ ಮಕ್ಕಳಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಒಂದು ವೇಳೆ ದೃಢಪಟ್ಟರೆ ಶ್ರೀಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.