ಮೂಡಿಗೆರೆ : ದೇವರಮಕ್ಕಿ ಗ್ರಾಮದ ಸೇತುವೆ ದುರಸ್ಥಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ…

592
firstsuddi

ಮೂಡಿಗೆರೆ : ಗೋಣಿಬೀಡು ಹೋಬಳಿ ದೇವರಮಕ್ಕಿ ಗ್ರಾಮದ ಸೇತುವೆ ಸಂಪೂರ್ಣ ಕುಸಿಯುವ ಹಂತದಲ್ಲಿದ್ದು, ದುರಸ್ಥಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿ. ಹೊಸಹಳ್ಳಿ, ಹಿರೇಶಿಗರ ಗ್ರಾಮ ಸೇರಿದಂತೆ ಹಲವು ಗ್ರಾಮಗಳಿಗೆ ಹಾದು ಹೋಗುವ ರಸ್ತೆಯಾಗಿದ್ದು, ಸಂಬಧಪಟ್ಟ ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ನೆನೆಗುದಿಗೆ ಬಿದ್ದಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ಮಾಡುವವರು ಪ್ರಾಣ ಭಯದಿಂದ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದ್ದು, ಆತಂಕದಿಂದಲೇ ವಾಹನ ಚಲಾಯಿಸುವಂತಾಗಿದೆ. ಇದೇ ಸೇತುವೆಯ ಮಾರ್ಗವಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಬೇಕಾಗಿದ್ದು, ಕೂಡಲೇ ದುರಸ್ಥಿ ಕಾರ್ಯ ಮಾಡಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸೇತುವೆ ಕುಸಿಯುವ ಹಂತಕ್ಕೆ ಬಂದಿದ್ದು, ಸಂಸದೆ ಶೋಭಾ ಕರಂದ್ಲಾಜೆ ಅವರು ಆ ದಿನಗಳಲ್ಲಿ ಜನರ ಓಲೈಕೆಗಾಗಿ ಗ್ರಾಮಕ್ಕೆ ಭೇಟಿ ನೀಡಿದ್ದರು ಅಷ್ಟೆ. ಆದರೆ ಯಾವುದೇ ಪ್ರಯೋಜನಕ್ಕೆ ಬಾರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಗ್ರಾಮಸ್ಥರಾದ ನಾಗೇಶ್ ಗೌಡ ಹೆಚ್.ಸಿ ಅವರು, ಸೇತುವೆಯ ಒಳಭಾಗ ಮತ್ತು ಮೇಲ್ಭಾಗ ಸಂಪೂರ್ಣ ಕುಸಿಯುವ ಹಂತದಲ್ಲಿದ್ದರೂ ಸೇತುವೆ ದುರಸ್ಥಿಗೊಳಿಸಲು ಆಸಕ್ತಿ ತೋರುತ್ತಿಲ್ಲ. ಜನಪ್ರತಿನಿಧಿಗಳಿಗೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ನಾವುಗಳು ನೆನಪಿಗೆ ಬರುವುದು, ಗೆದ್ದ ನಂತರ ನಮ್ಮ ಕಷ್ಟಗಳಿಗೆ ಯಾರೂ ಸ್ಪಂಧಿಸುವುದಿಲ್ಲ. ಸೇತುವೆ ಕುಸಿಯುವ ಹಂತದಲ್ಲಿದ್ದು, ವಾಹನ ಸಂಚಾರ ಹಾಗೂ ಕೃಷಿ ಚಟುವಟಿಕೆಗಳ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿದ್ದೇವೆ. ಇನ್ನಾದರೂ ಇದರ ಬಗ್ಗೆ ಗಮನಹರಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷತನವನ್ನು ಪಕ್ಕಕ್ಕೆ ಇಟ್ಟು ಮುಂದಾಗುವ ಅವಘಡಗಳನ್ನು ತಪ್ಪಿಸಿ ಕೂಡಲೇ ಸೇತುವೆಯನ್ನು ದುರಸ್ಥಿಗೊಳಿಸಿ ಗ್ರಾಮಸ್ಥರ ಅನುಕೂಲಕ್ಕೆ ಅನುವು ಮಾಡಿಕೊಡಬೇಕು ಎಂದರು.