ಮೂಡಿಗೆರೆ : ಬಸ್ಸಿಗೆ ನೀಡಲು ಹಣವಿಲ್ಲದೆ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಹಣವನ್ನು ನೀಡಿ ಮಾನವೀಯತೆ ಮೆರೆದ ಬಣಕಲ್ ಪೋಲಿಸರು…

256
firstsuddi

ಕೊಟ್ಟಿಗೆಹಾರ : ಬಸ್ಸಿಗೆ ನೀಡಲು ಹಣವಿಲ್ಲದೆ ಮಂಗಳೂರಿನಿಂದ ರಾಮನಗರ ಜಿಲ್ಲೆಯ ಮೆಳೆಕೋಟೆಗೆ ಅನಾರೋಗ್ಯದ ನಡುವೆಯೂ ನಡೆದು ಹೋಗುತ್ತಿದ್ದ ವ್ಯಕ್ತಿಯೊರ್ವರಿಗೆ ಬಣಕಲ್ ಠಾಣೆಯ ಪೊಲೀಸರು ಸಾಂತ್ವನ ಹೇಳಿ ಪ್ರಯಾಣಕ್ಕೆ ಅಗತ್ಯವಿರುವ ಹಣವನ್ನು ತಮ್ಮ ಕೈಯಿಂದಲೇ ನೀಡಿ ಮಾನವೀಯತೆ ಮೆರೆದಿದ್ದಾರೆ.
ರಾಮನಗರ ಜಿಲ್ಲೆಯ ಮೆಳೆಕೋಟೆ ಗ್ರಾಮದ ವಿಜಯಕುಮಾರ್ ಕೆಲ ತಿಂಗಳ ಹಿಂದೆ ಮಂಗಳೂರು ಆಸ್ಪತ್ರೆಯೊಂದರಲ್ಲಿ ಕಾಲಿನ ನೋವಿನ ಕಾರಣ ಚಿಕಿತ್ಸೆಗಾಗಿ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.
ಅತ್ಯಂತ ಕಡುಬಡವರಾದ ವಿಜಯ್‍ಕುಮಾರ್‍ಗೆ ಸಂಬಂಧಿಕರು ಯಾರು ಇಲ್ಲದ ಕಾರಣ ಕಾಲುನೋವಿನಿಂದ ಬಳಲುತ್ತಿದ್ದ ಅವರನ್ನು ಯಾರೋ ಪರಿಚಯದವು ಆಸ್ಪತ್ರೆಗೆ ದಾಖಲಿಸಿ ಹೋಗಿದ್ದರು. ನಂತರ ಅವರ ಸಂಪರ್ಕವೂ ಕಡಿದು ಹೋಗಿತ್ತು. ಆಸ್ಪತ್ರೆಯಿಂದ ಗುಣಮುಖರಾಗಿ ಹೊರಬಂದವನಿಗೆ ದಿಕ್ಕು ತೋಚದಂತಾಗಿತ್ತು.
ಯಾರೊಂದಿಗೂ ಹಣ ಕೇಳದೆ ನಡೆದೆ ಊರು ಸೇರೋಣ ಎಂದು ತೀರ್ಮಾನಿಸಿ ನಡೆದೆ ಊರಿನ ಕಡೆಗೆ ಹೊರಟ್ಟಿದ್ದರು. ಕಳೆದ ಎರಡು ದಿನಗಳಿಂದ ಮಂಗಳೂರಿನಿಂದ ನಡೆದು ಬಣಕಲ್ ತಲುಪಿದ ವಿಜಯಕುಮಾರ್, ತೀವ್ರ ಹಸಿವಿನಿಂದ ಬಳಲಿ ಹೋಟೆಲೊಂದರಲ್ಲಿ ಹೊಟ್ಟೆ ತುಂಬಾ ನೀರು ಕುಡಿದು ಅಂಗಡಿ ಬಾಗಿಲಲ್ಲಿ ಮಲಗಿದ್ದರು.
ರಾತ್ರಿ ಗಸ್ತಿನಲ್ಲಿದ್ದ ಬಣಕಲ್ ಠಾಣೆಯ ಪೋಲಿಸ್ ಸಿಬ್ಬಂದಿಗಳಾದ ನಂದೀಶ್ ಮತ್ತು ಕಿರಣ್ ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ ವಿಚಾರಿಸಿದ್ದು, ಪೊಲೀಸ್ ಸ್ಟೇಷನಿಗೆ ಕರೆತಂದು ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಬೆಳಗಿನ ಉಪಹಾರವನ್ನು ಕೊಡಿಸಿ ಒಂದು ಜೊತೆ ಬಟ್ಟೆಯನ್ನು ಕೊಟ್ಟು ಊರಿಗೆ ಸೇರಲು ಅಗತ್ಯವಿದ್ದಷ್ಟು ಹಣವನ್ನು ನೀಡಿ ಬಸ್ಸು ಹತ್ತಿಸಿದ್ದಾರೆ.